ದಾವಣಗೆರೆ,ಜೂ.14- ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ನಾಡಿದ್ದು ದಿನಾಂಕ 16ರ ಬುಧವಾರ 90 ವರ್ಷಗಳನ್ನು ಪೂರೈಸಿ 91ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಎಸ್ಸೆಸ್, ಎಲ್ಲರ ಹಾರೈಕೆ ಮತ್ತು ದೇವರ ಆಶೀರ್ವಾದದಿಂದ ತಾವು ಆರೋಗ್ಯವಾಗಿದ್ದು, ಎಲ್ಲರ ಜೊತೆ ಇದ್ದು ಜನಸೇವೆ ಮಾಡುವ ಭಾಗ್ಯ ತಮಗೆ ಲಭಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
`ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಎಲ್ಲರ ಹಾರೈಕೆ ಮತ್ತು ಶುಭಾಶಯಗಳು ಸದಾ ನನ್ನ ಜೊತೆ ಇದ್ದೇ ಇರುತ್ತವೆ ಎಂದು ನಂಬಿದ್ದೇನೆ. ಕೊರೊನಾದ ಈ ಸಂದರ್ಭದಲ್ಲಿ ಜನ್ಮದಿನದ ಶುಭಾಶಯ ತಿಳಿಸಲೆಂದು ಗುಂಪು – ಗುಂಪಾಗಿ ಬರದೇ ನೀವು ಇದ್ದ ಸ್ಥಳದಿಂದಲೇ ನನಗೆ ಶುಭ ಹಾರೈಸಬೇಕೆಂದು ವಿನಂತಿಸುತ್ತೇನೆ’ ಎಂದು ಎಸ್ಸೆಸ್ ಕೇಳಿಕೊಂಡಿದ್ದಾರೆ.
`ಪರಸ್ಪರ ಅಂತರ ಕಾಪಾಡುವುದು ನಮ್ಮ -ನಿಮ್ಮೆಲ್ಲರ ಜವಾಬ್ಧಾರಿಯಾಗಿದ್ದು, ಇದನ್ನು ಎಲ್ಲರೂ ಪಾಲಿಸೋಣ. ಹಾರ – ತುರಾಯಿಗಳಿಗಿಂದ ನಿಮ್ಮ ಹೃದಯಾಳದ ಹಾರೈಕೆ ಅಮೂಲ್ಯ. ದೇವರು ನಿಮ್ಮೆಲ್ಲರ ಸೇವೆ ಮಾಡಲು ಕಲ್ಪಿಸಿರುವ ಈ ಅವಕಾಶಕ್ಕೆ ನಾನು ಸದಾ ಋಣಿಯಾಗಿರುತ್ತೇನೆ’ ಎಂದು ಅವರು ತಿಳಿಸಿದ್ದಾರೆ.