ದೂಡಾ ಆಯುಕ್ತರಿಂದ ರೈತರಿಗೆ ಕಿರುಕುಳ: ಆರೋಪ

ದಾವಣಗೆರೆ, ಮಾ.19 – ತುಂಡು ಭೂಮಿ ಮಾರಾಟ ಮಾಡಲು ಸರ್ಕಾರದ ಅನುಮತಿಯಿದ್ದರೂ ಸಹ ರೈತರು ಈಗಾಗಲೇ ಮಾರಾಟ ಮಾಡಿರುವ ತುಂಡು ಭೂಮಿಯ ನೋಂದಣಿ ರದ್ಧುಗೊಳಿಸುವುದಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನೋಟಿಸ್ ನೀಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಾಲ್ಲೂಕಿನ ರೈತರು ಆರೋಪಿಸಿದ್ದಾರೆ.  

ದಾವಣಗೆರೆ ತಾಲ್ಲೂಕಿನ ದೊಡ್ಡಬೂದಿಹಾಳ್, ಚಿಕ್ಕಬೂದಿಹಾಳ್, ಯರಗುಂಟೆ, ಚಿಕ್ಕನಹಳ್ಳಿ, ಕುಂದವಾಡ, ಕರೂರು, ಬಾತಿ, ನಿಟ್ಟುವಳ್ಳಿ, ಶಾಬನೂರು, ಆವರಗೆರೆ, ತೋಳಹುಣಸೆ, ಆನೆಕೊಂಡ, ಬಸಾಪುರ ಮತ್ತು ದಾವಣಗೆರೆ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ನೀರಾವರಿ ಮೂಲಗಳಿಲ್ಲದಿದ್ದರೂ ಕಷ್ಟಪಟ್ಟು ಬೆಳೆದಿರುವ ಬೆಳೆಗಳು ಬಿಡಾಡಿ ದನಗಳು, ಹಂದಿಗಳ ಕಾಟದಿಂದ ಹಾಳಾಗುತ್ತಿವೆ. ಇದರಿಂದ ರೈತರು ತಮ್ಮ ಜಮೀನನ್ನು ತುಂಡು ಭೂಮಿಯಾಗಿ (ರೆವಿನ್ಯೂ ಸೈಟ್) ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ತೆಲಿಗಿ ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ. ಈ ಭಾಗದ ಸುತ್ತಮುತ್ತಲ ಜಮೀನು ಹಸಿರು ವಲಯದಲ್ಲಿ ರುವುದರಿಂದ ದೂಡಾದಲ್ಲಿ ಭೂ-ಪರಿವರ್ತನೆ ಮಾಡಲು ಅವಕಾಶ ಇರದ ಕಾರಣ ಇರುವ ಜಮೀನನ್ನೇ ಕಾನೂನುಬದ್ಧವಾಗಿ ತುಂಡಾಗಿ ಮಾರಾಟ ಮಾಡಿ ರೈತರು ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ, ದೂಡಾ ಆಯುಕ್ತರು ಈಗಾಗಲೇ ಮಾರಾಟ ಮಾಡಿರುವ ತುಂಡು ಭೂಮಿ ನೋಂದಣಿ ರದ್ಧುಗೊಳಿಸಲಾಗುತ್ತದೆ ಎಂದು ನೋಟಿಸ್ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. 

ನೋಟಿಸ್‍ನಿಂದ ಯಾರಾದರೂ ತೊಂದರೆ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡರೆ ದೂಡಾ ಆಯುಕ್ತರೇ ಕಾರಣರಾಗು ತ್ತಾರೆ ಎಂದು ತೆಲಿಗಿ ಮಲ್ಲಿಕಾರ್ಜುನಪ್ಪ, ಬಿ.ಡಿ. ಬಸವರಾಜಪ್ಪ, ಬಿ.ವಿ. ಹನುಮಂತಪ್ಪ,
ಬಿ.ಹೆಚ್. ರಾಜಪ್ಪ, ಹೇಮಂತರಾಜು, ಹೆಚ್. ಆಂಜನೇಯ,
ಬಿ. ಶಿವಾನಂದಪ್ಪ ಸೇರಿದಂತೆ ಅನೇಕ ರೈತರು ಎಚ್ಚರಿಕೆ ನೀಡಿದ್ದಾರೆ.

error: Content is protected !!