ಹದಿನಾಲ್ಕು ವರ್ಷದೊಳಗಿನವರಿಗೆ ಕೊರೊನಾ ಪರಿಣಾಮ ಕಡಿಮೆ, ಲೋಕಸಭೆಗೆ ಕೇಂದ್ರ ಸರ್ಕಾರದ ಮಾಹಿತಿ
ನವದೆಹಲಿ, ಮಾ. 19 – ಹದಿನಾಲ್ಕು ವರ್ಷದೊಳಗಿನ ಮಕ್ಕಳ ಮೇಲೆ ಕೊರೊನಾ ಪರಿಣಾಮ ಕಡಿಮೆ ಎಂಬುದು ಅಧ್ಯಯನದಿಂದ ತಿಳಿದು ಬಂದಿರುವುದಾಗಿ ಕೇಂದ್ರ ಸಚಿವ ಹರ್ಷ ವರ್ಧನ್ ಲೋಕಸಭೆಗೆ ತಿಳಿಸಿದ್ದಾರೆ.
ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಅವರು, ಮಕ್ಕಳಲ್ಲಿ ಬಹುತೇಕ ಲಕ್ಷಣ ರಹಿತವಾಗಿರುತ್ತದೆ ಇಲ್ಲವೇ ಲಘು ಲಕ್ಷಣಗಳನ್ನು ತೋರುತ್ತದೆ. ಹೀಗಾಗಿ ಮಕ್ಕಳ ಮೇಲೆ ಆಗುವ ಕೊರೊನಾ ಪರಿ ಣಾಮ ಕಡಿಮೆ ಮಾಡಲು ಯಾವುದೇ ನಿರ್ದಿಷ್ಟ ಸೂತ್ರವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.
ತೀರಾ ಅಪರೂಪಕ್ಕೆ ಮಕ್ಕಳಲ್ಲಿ ಬಹು ಅಂಗ ಊತದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ವಾಗಿ ಸೋಂಕಿನ ಆರು ವಾರಗಳ ನಂತರ ಈ ಲಕ್ಷಣ ಕಂಡು ಬರುತ್ತದೆ ಎಂದವರು ಹೇಳಿದ್ದಾರೆ.
ಎ.ಐ.ಐ.ಎಂ.ಎಸ್.ನಲ್ಲಿರುವ ಮಕ್ಕಳ ವಿಭಾಗ ಕೊರೊನಾದಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಪರಿಣಾಮಗಳ ಬಗ್ಗೆ ದಾಖಲೆ ರೂಪಿಸಿದೆ ಎಂದವರು ಹೇಳಿದ್ದಾರೆ.
ಹದಿನಾಲ್ಕು ವರ್ಷದೊಳಗಿನ ಮಕ್ಕಳ ಮೇಲೆ ಕೊರೊನಾದಿಂದ ಆಗುವ ಪರಿಣಾಮ ತಗ್ಗಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ? ಎಂಬ ಪ್ರಶ್ನೆಗೆ ಸಚಿವ ವರ್ಧನ್ ಈ ಉತ್ತರ ನೀಡಿದ್ದಾರೆ.
ಕೊರೊನಾ ಸೋಂಕಿಗೆ ಸಿಲುಕಿದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿರುವ ಸಚಿವರು, ಆರೋಗ್ಯ ಸೇವೆ ವೃತ್ತಿಪರರಿಂದ ನೆರವು ಕಲ್ಪಿಸಲಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕುಟುಂಬದವರ ಮಾನಸಿಕ ಸ್ವಾಸ್ಥ್ಯಕ್ಕಾಗಿ §ಮನೋದರ್ಪಣ್¬ ಎಂಬ ಯೋಜನೆ ರೂಪಿಸಿದೆ ಎಂದರು.
ಪರಿಸ್ಥಿತಿ ಎದುರಿಸುವ ಸಲುವಾಗಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗಾಗಿ ದೂರವಾಣಿ ಮೂಲಕ ಆಪ್ತ ಸಮಾಲೋಚನೆ ನಡೆಸಲು 84484 40632 ಸಂಖ್ಯೆಯ ಸುಂಕ ರಹಿತ ಸಹಾಯವಾಣಿ ಸೌಲಭ್ಯ ಕಲ್ಪಿಸಲಾಗಿದೆ ಎಂದವರು ಹೇಳಿದ್ದಾರೆ.
ಕೊರೊನಾ ಪ್ರಕರಣಗಳ ನಿರ್ವಹಣೆಗೆ ಮೂರು ಹಂತದ ವ್ಯವಸ್ಥೆ ರೂಪಿಸಲಾಗಿದೆ. ಲಘು ಹಾಗೂ ಲಕ್ಷಣ ಪೂರ್ವ ಪ್ರಕರಣಗಳಿಗಾಗಿ ಕೊರೊನಾ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ತೀವ್ರ ಸ್ವರೂಪದ ಪ್ರಕರಣಗಳಿಗಾಗಿ ಆಕ್ಸಿಜನ್ ಬೆಡ್ಗಳಿರುವ ಕೊರೊನಾ ಆರೋಗ್ಯ ಕೇಂದ್ರಗಳು ಹಾಗೂ ಐ.ಸಿ.ಯು. ಬೆಡ್ಗಳಿರುವ ಕೊರೊನಾ ಆಸ್ಪತ್ರೆಗಳನ್ನು ರೂಪಿಸಲಾಗಿದೆ ಎಂದವರು ಹೇಳಿದ್ದಾರೆ.