ದೀಟೂರು ಏತ ನೀರಾವರಿ ಯೋಜನೆ ನ್ಯೂನತೆ ಸರಿಪಡಿಸಲು ಒತ್ತಾಯ

ದೀಟೂರು ಏತ ನೀರಾವರಿ ಯೋಜನೆ ನ್ಯೂನತೆ ಸರಿಪಡಿಸಲು ಒತ್ತಾಯ - Janathavaniದಾವಣಗೆರೆ, ಜೂ.7- ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆಗಳ ದೀಟೂರು ಏತ ನೀರಾವರಿ ಯೋಜನೆಯ ನ್ಯೂನತೆ ಸರಿಪಡಿಸಿ, ಗುಣಮಟ್ಟದ ಕಾಮ ಗಾರಿ ನಿರ್ವಹಿಸುವಂತೆ ಜಿ.ಪಂ. ಮಾಜಿ ಸದಸ್ಯರೂ, ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶಪ್ಪ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಗುಣಮಟ್ಟದ ಮತ್ತು ಕಂಪನಿ ಸಿದ್ದಪಡಿಸಿದ್ದ ಹೆಚ್‌.ಡಿ. ಪೈಪನ್ನೇ ಅಳವಡಿಸಿದರೆ ದೀರ್ಘಕಾಲ ಬಾಳಿಕೆ ಬರುತ್ತದೆ. ಈ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಸ್‌.ವಿ. ರಾಮಚಂದ್ರ ಅವರ ಗಮನಕ್ಕೆ ತರಲಾಗಿದ್ದು, ಸಕಾರಾತ್ಮಕ ಸ್ಪಂದನ ದೊರೆತಿದೆ ಎಂದರು.

ಈಗಿರುವ ಗುತ್ತಿಗೆಯ 5 ವರ್ಷದ ನಿರ್ವ ಹಣೆಯ ಅವಧಿಯನ್ನು 10 ವರ್ಷಕ್ಕೆ ವಿಸ್ತರಿಸಿ ಕಾಮಗಾರಿ ಕಳಪೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಂಸದರು, ಶಾಸಕರು ಕೂಡ ಪರಿಶೀಲಿಸುವಂತೆ ಮನವಿ ಮಾಡಿದರು.

ಹರಿಹರ ತಾಲ್ಲೂಕು ದೀಟೂರು ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿ ಜಾಕ್‌ವೆಲ್‌ ನಿರ್ಮಾಣ ಮಾಡಿದ್ದು, 2400 ಹೆಚ್‌.ಪಿ. ಸಾಮರ್ಥ್ಯದ 8 ಮೋಟರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ 1.39 ಟಿಎಂಸಿ ನೀರನ್ನು 30 ಕಿ.ಮೀ. ದೂರದ ಅಣಜಿ ಸಮೀಪದ ಚಟ್ನಳ್ಳಿ ಗುಡ್ಡದವರೆಗೆ ವಿದ್ಯುತ್‌ ಮೂಲಕ ಎತ್ತಲಾಗು ವುದು. ನಂತರ ನದಿಯಿಂದ ಚಟ್ನಳ್ಳಿ ಗುಡ್ಡದವರೆಗೆ 600 ಅಡಿ ಎತ್ತರದಲ್ಲಿ ಗುರುತ್ವಾಕರ್ಷಣೆ ಮೂಲಕ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.

ಯುವ ಜನರಿಗೆ ಈ ಯೋಜನೆಯ ಬಗ್ಗೆ ಅರಿವು ಇಲ್ಲದಿದ್ದರೆ ಮುಂದಿನ ಪೀಳಿಗೆ ತೊಂದರೆ ಅನುಭವಿಸಬೇಕಾದೀತು ಎಂದು ಎಚ್ಚರಿಸಿದರು. ಸ್ಥಳದಲ್ಲಿಯೇ ತಯಾರಿಸುವ ಎಂ.ಎಸ್‌. ಪೈಪ್‌ ಬದಲು ಕಂಪನಿಯಿಂದ ತಯಾರಾಗಿರುವ ಗುಣ ಮಟ್ಟದ ಪೈಪ್‌ಗಳನ್ನು ಅಳವಡಿಸಲು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೇವಿಕೆರೆ ಗ್ರಾ.ಪಂ. ಸದಸ್ಯ ಗುರುಸ್ವಾಮಿ, ಚಟ್ನಳ್ಳಿ ಜಂಭುಗೌಡ್ರು, ಪ್ರಭು ಅಣಜಿಗೆರೆ ಉಪಸ್ಥಿತರಿದ್ದರು.

error: Content is protected !!