ದಾವಣಗೆರೆ, ಮಾ.18- ಆನ್ಲೈನ್ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳು ಮತ್ತು ಅವರ ಆರ್ಥಿಕ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಈ ಶೈಕ್ಷಣಿಕ ವರ್ಷವನ್ನು ಪುನರ್ ನವೀಕರಣಗೊಳಿಸುವ ಬೇಡಿಕೆಗೆ ಸರ್ಕಾರ ಗಮನ ಹರಿಸುವಂತೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಆಗ್ರಹಿಸಿದೆ.
ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ಪೋಷಕ ರಿಂದ ಬಂದ ಈ ಬೇಡಿಕೆಗೆ ಸರ್ಕಾರ ಗಮನ ಹರಿಸಲಿಲ್ಲ. ವಿದ್ಯಾರ್ಥಿಗಳ ಯೋಗಕ್ಷೇಮ, ಸರಿಯಾದ ಶೈಕ್ಷಣಿಕ ಕಲಿಕೆ, ಭವಿಷ್ಯಕ್ಕಾಗಿ ಯುವ ಮನಸ್ಸುಗಳಿಗೆ ತರಬೇತಿ ನೀಡುವು ದು, ಯಾವುದೇ ಪ್ರತಿಕೂಲ ಸಂದರ್ಭಗಳನ್ನೂ ಎದುರಿಸ ಬಲ್ಲ ವ್ಯಕ್ತಿತ್ವವನ್ನು ಬೆಳೆಸುವುದು ಇವೆಲ್ಲವನ್ನೂ ಕಸದ ತೊಟ್ಟಿಗಳಿಗೆ ಎಸೆಯಲಾಗಿದೆ. ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಪರೀಕ್ಷಾ ನಡೆಸುತ್ತಿರುವುದೇ ಶುಲ್ಕ ವಸೂಲಿ ಮಾಡು ವುದಕ್ಕೆ ಸರ್ಕಾರ ಮತ್ತು ಖಾಸಗಿ ಕಾಲೇಜುಗಳು ಹೊಂದಿದ್ದ ಏಕೈಕ ಕಾಳಜಿ ಎಂದು ಸಂಘಟನೆಯ ಜಿಲ್ಲಾಧ್ಯಕ್ಷೆ ಸೌಮ್ಯ ಹಾಗೂ ಕಾರ್ಯದರ್ಶಿ ಪೂಜಾ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಂದ ಆಘಾತಕ್ಕೊಳಗಾಗಿದೆ. ಭವಿಷ್ಯದ ಭಯದಿಂದ ಪಾರಾಗಲು ವಿದ್ಯಾರ್ಥಿಗಳು ಆತ್ಮಹತ್ಯೆ ಮೊರೆ ಹೋಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಭವಿಷ್ಯದ ಬಗ್ಗೆ ಅನಿಶ್ಚಿತತೆ ಮತ್ತು ನಿರುದ್ಯೋಗದ ಭಯ ಈಗಾಗಲೇ ತಲೆದೋರಿದ್ದ ಸಂಗತಿ. ವಿದ್ಯಾರ್ಥಿಗಳ ಮೇಲೆ ಕೇವಲ ಉತ್ತಮ ಅಂಕಗಳು ಅಥವಾ ಶ್ರೇಣಿಗಳ ಯಾವುದೇ ಒತ್ತಡವನ್ನು ಹೇರದೆ ಅವರಿಗೆ ಸಹಾಯ ಹಸ್ತ ಚಾಚುತ್ತಾ ಶಿಕ್ಷಣ ವ್ಯವಸ್ಥೆಯನ್ನು ಉಳಿಸಬಲ್ಲ ಪ್ರಬಲ ವಿದ್ಯಾರ್ಥಿ ಚಳವಳಿಗೆ ನಾವು ಸಜ್ಜಾಗಬೇಕು. ಶಿಕ್ಷಣವು ಮನುಷ್ಯನನ್ನಾಗಿಸುವ ಮತ್ತು ವ್ಯಕ್ತಿತ್ವ ನಿರ್ಮಾಣ ಮಾಡುವ ಪ್ರಕ್ರಿಯೆ. ವಿದ್ಯಾರ್ಥಿಗಳಾದ ನಾವುಗಳೇ ಅಂತಹ ಶಿಕ್ಷಣವನ್ನು ಉಳಿಸಲು ಸಾಧ್ಯ. ಧೈರ್ಯದಿಂದ ಪರೀಕ್ಷೆ ಎದುರಿಸಬೇಕೆಂದಿದ್ದಾರೆ.