ಹರಪನಹಳ್ಳಿ, ಮಾ.18- ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಶಾಲೆಯಿಂದ ಹೊರಗೆ ಉಳಿದ 6 ರಿಂದ 12 ವರ್ಷದೊಳಗಿನ ಮಕ್ಕಳ ಸಮೀಕ್ಷೆ ಪಟ್ಟಣದಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ನಡೆಯುತ್ತಿದೆ. ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ನೀಡಿ ಸಮೀಕ್ಷೆಗೆ ಸಹಕರಿಸಿ ಯಶಸ್ವಿಗೊಳಿಸಬೇಕೆಂದು ಸಾರ್ವಜನಿಕರಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜ್ ನಾಯ್ಕ ಮನವಿ ಮಾಡಿದ್ದಾರೆ.
ಈ ಸಮೀಕ್ಷೆಗೆ ಪುರಸಭೆಯ 6 ಸಿಬ್ಬಂದಿಗಳನ್ನು ಹಾಗೂ ಹೊರಗಿನ 7 ಜನರನ್ನು ನೇಮಿಸಿಕೊಳ್ಳಲಾಗಿದೆ. ಪಟ್ಟಣದಲ್ಲಿ ಒಟ್ಟು 10,976 ಮನೆಗಳಿದ್ದು ಸದ್ಯ 4,000 ಸಾವಿರ ಮನೆಗಳ ಸಮೀಕ್ಷೆ ನಡೆದಿದೆ. ಉಳಿದ 6,976 ಮನೆಗಳ ಸಮೀಕ್ಷೆ ಬಾಕಿ ಇದೆ ಎಂದ ಅವರು, ಈ ಕಾರ್ಯ ಆನ್‍ಲೈನ್ ಮೂಲಕ ನಡೆಯುತ್ತಿರುವುದರಿಂದ ಒಂದು ಮನೆ ಸಮೀಕ್ಷೆಗೆ ಕನಿಷ್ಠ 15 ರಿಂದ 20 ನಿಮಿಷ ಬೇಕಾಗುತ್ತದೆ ಎಂದರು.
ಈ ಸಮಿಕ್ಷೆಯ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಬೇಡ ಎಂದ ಅವರು ಇದು ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ನಡೆಸಲಾಗುತ್ತಿದೆ. ನಿಮ್ಮ ಮನೆ ಬಾಗಿಲಿಗೆ ನಮ್ಮ ಸಮೀಕ್ಷೆದಾರರು ಬಂದಾಗ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿಯನ್ನು ನೀಡಿ ಅವರಿಗೆ ಸಹಕರಿಸಿ ಎಂದರು.
ಕೋವಿಡ್ ಲಸಿಕೆಯ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಲಸಿಕೆಯನ್ನು ಹಾಕಿಸಿಕೊಳ್ಳಿ. ಲಸಿಕೆಯನ್ನು ಸಾರ್ವಜನಿಕ ಆಸ್ಪತ್ರೆ ಹಾಗೂ ಅಂಬೇಡ್ಕರ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಗುವುದು. ಮಧುಮೇಹ ಹಾಗೂ ರಕ್ತದೊತ್ತಡ ಇರುವವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದು ತಿಳಿಸಿದ್ದಾರೆ.