ವಲಯ ಮಟ್ಟದ ಖಾದಿ ಮೇಳ

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪ

ದಾವಣಗೆರೆ, ಮಾ. 18- ಕೊರೊನಾ ಕಾರಣದಿಂದಾಗಿ ಖಾದಿ ಉತ್ಪನ್ನಗಳ ದಾಸ್ತಾನು ಉಳಿದಿದ್ದು, ಇವುಗಳ ಮಾರಾಟಕ್ಕೆ ನಗರದಲ್ಲಿ ವಲಯ ಮಟ್ಟದ ಖಾದಿ ಮೇಳ ನಡೆಸಲಾಗುವುದು ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪ ಗೌಡ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೊರೊನಾದಿಂದ ನೂರಾರು ಕೋಟಿ ರೂ.ಗಳ ಖಾದಿ ಉತ್ಪನ್ನ ಮಾರಾಟವಾಗದೇ ಉಳಿದಿದೆ. ಹೀಗಾಗಿ ಮೂರ್ನಾಲ್ಕು ತಿಂಗಳಲ್ಲಿ ನಗರದಲ್ಲಿ ಖಾದಿ ಮೇಳ ನಡೆಸಲಾಗುವುದು. ಹೊರ ರಾಜ್ಯಗಳವರೂ ಸೇರಿದಂತೆ ಸುಮಾರು 150 ಮಳಿಗೆಗಳ ಮೇಳ ನಡೆಸಲಾಗುವುದು ಎಂದು ತಿಳಿಸಿದರು.

ಕಳೆದ 7 ವರ್ಷಗಳಿಂದ ಖಾದಿ ಸಂಸ್ಥೆಗಳಿಗೆ 75.85 ಕೋಟಿ ರೂ. ಬಾಕಿ ಇತ್ತು. ಇದರಲ್ಲಿ ದಾವಣಗೆರೆ ಜಿಲ್ಲೆಯ ಬಾಕಿ 3.8 ಕೋಟಿ ರೂ. ಆಗಿತ್ತು. ಇದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದ್ದು, ಹತ್ತು ದಿನಗಳಲ್ಲೇ ಸಂಬಂಧಪಟ್ಟ ಸಂಸ್ಥೆಗಳಿಗೆ ಬಿಡುಗಡೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ, ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆ ಅನ್ವಯ ಜಿಲ್ಲೆಯಲ್ಲಿ 25 ಘಟಕಗಳಿಗೆ ಸಾಲ ಮಂಜೂರಾತಿ ಆಗಿದೆ. ಮುಂದಿನ ವರ್ಷ 50 ಘಟಕಗಳಿಗೆ ಸಾಲದ ನೆರವು ನೀಡಲಾಗುವುದು ಎಂದರು.

ಡಿಸೈನರ್ ಉಡುಗೆಗಳ ಮೂಲಕ ಖಾದಿ ಉತ್ಪನ್ನಗಳನ್ನು  ಜನಪ್ರಿಯಗೊಳಿಸುವ ಪ್ರಮುಖ ಉದ್ದೇಶ ಮಂಡಳಿಯದ್ದಾಗಿದೆ. ಇದರ ಜೊತೆಗೆ ಖಾದಿ ಪ್ಲಾಜಾಗಳು, ಪ್ರದರ್ಶನ ಮಳಿಗೆಗಳು, ಇ – ಮಾರುಕಟ್ಟೆ ಮೂಲಕ ಉತ್ಪಾದಕರಿಗೆ ನೆರವು ನೀಡಲಾಗುವುದು ಎಂದವರು ತಿಳಿಸಿದರು.

ಹತ್ತಿಯನ್ನೇ ನೈಸರ್ಗಿಕವಾಗಿ ಬಿಳಿ, ಹಳದಿ ಹಾಗೂ ಕಂದು ಬಣ್ಣದಲ್ಲಿ ಬೆಳೆಸುವ ತಂತ್ರಜ್ಞಾನ ಖಾದಿಗೆ ಉಪಯುಕ್ತವಾಗಿದೆ. ನೈಸರ್ಗಿಕ ಬಣ್ಣದ ಈ ಉಡುಪುಗಳಿಗೆ ಅತಿ ಹೆಚ್ಚಿನ ಬೇಡಿಕೆ ಇದೆ. ಡಿಸೈನರ್ ಉಡುಪುಗಳಿಗೆ ಭಾರೀ ಬೇಡಿಕೆ ಇದೆ. ಇದೆಲ್ಲವನ್ನೂ ಬಳಸಿಕೊಂಡು ಖಾದಿ ಜನಪ್ರಿಯಗೊಳಿಸಲಾಗುವುದು ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಂಡಳಿಯ ಜಿಲ್ಲಾ ಅಧಿಕಾರಿ ನವೀನ್ ಕುಮಾರ್, ಅಣಜಿಯ ಖಾದಿ ಸಂಸ್ಥೆಯ ರಂಗನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!