ಬಂದಿದೆ ಮೂರನೇ ಅಲೆ

ದಾವಣಗೆರೆ, ಜು. 31 – ಕೇರಳದಲ್ಲಿ ಕೊರೊನಾ ಸೋಂಕು ತೀವ್ರ ಹೆಚ್ಚಾಗಿದೆ. ಅದಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳು ಹಾಗೂ ಪಕ್ಕದ ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವೆಡೆ ಪಾಸಿಟಿವಿಟಿ ದರ ಶೇ.5ರಷ್ಟಿದ್ದು, ಇದೆಲ್ಲವೂ ಕೊರೊನಾದ ಮೂರನೇ ಅಲೆ ಬಂದಿರುವುದನ್ನು ತೋರಿಸುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಕೊರೊನಾ ಮೂರನೇ ಅಲೆ ತಡೆ ಕುರಿತು ಕರೆಯಲಾಗಿದ್ದ ಜಿಲ್ಲಾಡಳಿತದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕಳೆದ ಬಾರಿಯೂ ಪಕ್ಕದ ರಾಜ್ಯಗಳಲ್ಲಿ, ಆನಂತರದಲ್ಲಿ ಪಕ್ಕದ ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಾಗಿ ದಾವಣಗೆರೆಯಲ್ಲಿ ಕೊರೊನಾ ಉಲ್ಬಣಿಸಿತ್ತು. ಈ ಬಾರಿಯೂ ಅಂತಹದೇ ಪರಿಸ್ಥಿತಿ ಎದುರಾಗಿದೆ. ಕೊರೊನಾ ಮೂರನೇ ಅಲೆ ಬರಲಿದೆ ಎನ್ನಲಾಗದು, ಈಗಾಗಲೇ ಕೊರೊನಾ ಅಲೆ ಬಂದಿದೆ. ಈ ಬಗ್ಗೆ ತಾವು §ಎಚ್ಚರಿಕೆಯ ಗಂಟೆ¬ ಬಾರಿಸುತ್ತಿರುವುದಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದಿರುವ ಕಾರಣ  ರಾಜ್ಯ ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಕೊರೊನಾ ಸಂಬಂಧ ಪೂರ್ಣ ಅಧಿಕಾರ ನೀಡಿದ್ದಾರೆ. ಅದರಂತೆ ಕೊರೊನಾ ತಡೆಗಾಗಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದರು. ಕೊರೊನಾ ತಡೆಗಾಗಿ ಜನರು ಮಾಸ್ಕ್, ಸ್ಯಾನಿಟೈಜ್ ಹಾಗೂ ದೈಹಿಕ ಅಂತರಗಳನ್ನು ಕಾಯ್ದುಕೊಳ್ಳಬೇಕು. ಆರಾಧನಾ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಸ್ಥಳೀಯ ಸಂಸ್ಥೆಗಳು ಪೊಲೀಸರ ಜೊತೆಗೂಡಿ ಜನಸಂದಣಿ ತಪ್ಪಿಸಬೇಕು ಎಂದವರು ಹೇಳಿದರು.

ಮೊದಲ ಅಲೆಯಲ್ಲಿ 1,800 ಹಾಗೂ ಎರಡನೇ ಅಲೆಯಲ್ಲಿ 2,600 ಮಕ್ಕಳಿಗೆ ಕೊರೊನಾ ಬಂದಿತ್ತು. ಅದೇ ಅಂದಾಜಿನ ಅನ್ವಯ ಮೂರನೇ ಅಲೆಯಲ್ಲಿ 4 ಸಾವಿರ ಮಕ್ಕಳಿಗೆ ಕೊರೊನಾ ಬರುವ ಸಾಧ್ಯತೆ ಇದೆ. ಇವರಲ್ಲಿ 200 ಮಕ್ಕಳು ಆಸ್ಪತ್ರೆಗೆ ದಾಖಲಾಗಬಹುದು ಮತ್ತು ಇವರಲ್ಲಿ 40 ಜನ ಐ.ಸಿ.ಯು.ಗೆ ಸೇರಬಹುದು. ಈ ಹಿನ್ನೆಲೆಯಲ್ಲಿ ಸಿ.ಜಿ. ಆಸ್ಪತ್ರೆಯಲ್ಲಿ 36 ಬೆಡ್‌ಗಳ ಘಟಕ ರೂಪಿಸಲಾಗುತ್ತಿದೆ ಎಂದವರು ಹೇಳಿದರು.

ಚನ್ನಗಿರಿ, ಜಗಳೂರು, ಹರಿಹರ ಹಾಗೂ ಹೊನ್ನಾಳಿ ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ತ್ವರಿತವಾಗಿ ಚಾಲನೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಮದುವೆಗಳಲ್ಲಿ ಜನಸಂದಣಿ ಕಡಿಮೆ ಮಾಡಲು ಮದುವೆಯ ವಿಡಿಯೋ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚು ಜನರು ಸೇರಿದರೆ ಪ್ರಕರಣ ದಾಖಲಿಸಬೇಕು. ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಕೊರೊನಾ ತಡೆಗೆ ಸೂಕ್ತ ವರ್ತನೆ ಇರಬೇಕು. ಬೇರೆ ಜಿಲ್ಲೆಯಿಂದ ಬರುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಆಗಬೇಕು. ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಯಬೇಕು ಎಂದು ತಿಳಿಸಿದರು.

ಎಸ್ಪಿ ಸಿ.ಬಿ. ರಿಷ್ಯಂತ್ ಮಾತನಾಡಿ, ಮೂರನೇ ಅಲೆ ಬರುವುದು ಖಾತ್ರಿ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜನಸಂದಣಿ ತಡೆಯಲು 2-3 ದಿನ ಕಠಿಣ ಅಭಿಯಾನ ನಡೆಸಬೇಕು. ಆಗ ಜನರಲ್ಲಿ ಎಚ್ಚರಿಕೆ ಬರುತ್ತದೆ ಎಂದು ತಿಳಿಸಿದರು.

ಡಿ.ಹೆಚ್.ಒ. ಡಾ. ನಾಗರಾಜ್ ಮಾತನಾಡಿ, ಕೊರೊನಾದ ಮೂರನೇ ಅಲೆ ಮಕ್ಕಳಿಗೆ ಎಂದು ಭಾವಿಸಬಾರದು. ಕೊರೊನಾ ಹೆಚ್ಚಾಗಿ ಹಿರಿಯರಿಗೇ ಕಾಡುತ್ತದೆ. ಹೀಗಾಗಿ ತಾಲ್ಲೂಕು ಆಸ್ಪತ್ರೆಗಳು ಚಿಕಿತ್ಸೆಗೆ ಸನ್ನದ್ಧವಾಗಿರಬೇಕು ಎಂದು ತಿಳಿಸಿದರು.

ಜೆ.ಜೆ.ಎಂ.ಸಿ. ಅನಸ್ತೇಸಿಯ ವೈದ್ಯರಾದ ಡಾ. ರವಿ ಮಾತನಾಡಿ, ಟೆಸ್ಟ್‌ನಲ್ಲಿ ಪಾಸಿಟಿವ್ ಬರದೇ ರೋಗ ತೀವ್ರವಾಗಿ ಉಲ್ಬಣಗೊಳ್ಳುವ ಹಿರಿಯರು ಹಾಗೂ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಈ ಬಗ್ಗೆ ನಿಗಾ ವಹಿಸಬೇಕು. ಕೊವಿಡೇತರ ರೋಗಿಗಳ ಚಿಕಿತ್ಸೆಯ ಕಡೆಗೂ ಗಮನ ಹರಿಸಬೇಕು ಎಂದು ತಿಳಿಸಿದರು.

ಕೋವಿಡ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಬಡ್ತಿಯೊಂದಿಗೆ ವರ್ಗಾವಣೆ ಹೊಂದಿರುವ ಪ್ರಮೋದ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ. ರಾಘವನ್ ಮಾತನಾಡಿ, ಸೋಂಕು ಲಕ್ಷಣ ಇರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲು ವೈದ್ಯಕೀಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಹೆಚ್ಚು ಜನಸಂಪರ್ಕಕ್ಕೆ ಬರುವ ವರ್ಗದವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!