ದಾವಣಗೆರೆ, ಮಾ. 16 – ವಾದ್ಯ ಕಲಾವಿದರಿಗೆ ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯ ಕಲ್ಪಿಸಬೇಕು, ಕಲಾವಿದರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಮಾಸಾಶನ ನೀಡಬೇಕು ಎಂದು ದಾವಣಗೆರೆ ಜಿಲ್ಲಾ ಮಂಗಳ ವಾದ್ಯ ಕಲಾವಿದರ ಸಂಘ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ದಾವಣಗೆರೆ ಜಿಲ್ಲಾ ಮಂಗಳ ವಾದ್ಯ ಕಲಾವಿದರ ಸಂಘದ ಅಧ್ಯಕ್ಷ ಎಂ. ಹಾಲೇಶ್ ಬಸವನಾಳ್, ಜಿಲ್ಲೆಯಲ್ಲಿ 1,500 ಜನ ಈ ವೃತ್ತಿಯಲ್ಲಿದ್ದಾರೆ. ವರ್ಷದಲ್ಲಿ 2-3 ತಿಂಗಳು ಮಾತ್ರ ವಾದ್ಯಗಾರ ರಿಗೆ ಕೆಲಸ ಇರುತ್ತದೆ. ಹೀಗಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮಾತನಾಡಿ, ಸರ್ಕಾರದ ಬಳಿ ನೆರವು ಕೇಳಿದರೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಬಳಿ ಕೈ ತೋರಿಸುತ್ತಿದೆ. ಆದರೆ, ಪಾರಂಪರಿಕವಾಗಿ ಈ ವೃತ್ತಿಯಲ್ಲಿ ತೊಡಗಿರುವ ನಮಗೆ ಇಲಾಖೆ ಕೇಳುವ ದಾಖಲೆಗಳನ್ನು ಒದಗಿಸಲು ಸಾದ್ಯವಾಗದು ಎಂದರು.
ಆಂಧ್ರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಮಂಗಳ ವಾದ್ಯಗಾರರನ್ನು ನೇಮಿಸಲಾಗಿದೆ. ಅದೇ ರೀತಿ ಕ್ರಮವನ್ನು ರಾಜ್ಯದಲ್ಲೂ ತೆಗೆದುಕೊಳ್ಳಬೇಕು ಎಂದವರು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಬಳ್ಳಾರಿ ಕೆ.ಇ. ರುದ್ರೇಶ್, ಶಾಮನೂರು ನಾಗರಾಜ್, ಎಸ್. ರಾಜು, ಜಿ. ಗಣೇಶ್, ಟಿ.ಎಸ್. ವರಪ್ರಸಾದ್, ಹೊಸಹಳ್ಳಿ ಹನುಮಂತಪ್ಪ, ಹದಡಿ ಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.