ದಾವಣಗೆರೆ, ಮಾ.15- ಉತ್ತರ ಪ್ರದೇಶದಲ್ಲಿ ನನ್ನ ಫೇಸ್‍ಬುಕ್ ಖಾತೆಯನ್ನು ನಕಲಿಯಾಗಿ ಸೃಷ್ಠಿಸಲಾಗಿದ್ದು, ಈ ಖಾತೆಯನ್ನು ರದ್ದುಗೊಳಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.
ಇತ್ತೀಚೆಗೆ ನನ್ನ ಫೇಸ್‍ಬುಕ್ ಖಾತೆಯನ್ನು ನಕಲಿ ಯಾಗಿ ಸೃಷ್ಠಿಸಿ ಸುಮಾರು 100 ಜನರಿಗೆ ರಿಕ್ವೆಸ್ಟ್ ಕಳು ಹಿಸಿ ಅದರಲ್ಲಿ ಒಬ್ಬರಿಗೆ 9 ಸಾವಿರ ರೂ.ಗೆ ಬೇಡಿಕೆ ಇಡ ಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ಸೈಬರ್ ಕಳ್ಳರು ಹಣ ಮಾಡಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ, ಓಟಿಪಿ ಸಂಖ್ಯೆ, ಇ-ಮೇಲ್ ಐಡಿ, ಮೊಬೈಲ್ ಬಿಲ್ ಬಗ್ಗೆ ಹೀಗೆ ನಾನಾ ಕಾರಣಗಳ ನೆಪದಲ್ಲಿ ಬ್ಯಾಂಕಿನ ವಿವರ, ಮೊಬೈಲ್ ನಂಬರ್, ಆಧಾರ್ ಸಂಖ್ಯೆ, ಇ-ಮೇಲ್ ಐಡಿ ಸೇರಿದಂತೆ ವೈಯಕ್ತಿಕ ವಿವರಗಳನ್ನು ಪಡೆದು ವಂಚಿಸಲಾಗುತ್ತಿದೆ. ಹಾಗಾಗಿ ದೂರವಾಣಿ ಮುಖಾಂತರವಾಗಲೀ, ಅಪರಿಚಿತರಿಗಾಗಲೀ ಯಾವುದೇ ವೈಯಕ್ತಿಕ ಮಾಹಿತಿ ನೀಡದೇ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಮುನ್ನೆಚ್ಚರಿಸಿದರು.
ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸ್ನೇಹಿತರು, ಪರಿಚಿತರ ಹೊರತುಪಡಿಸಿ ಸಾರ್ವಜನಿಕವಾಗಿ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಶೇರ್ ಮಾಡದೇ ಗೌಪ್ಯತೆ ಕಾಪಾಡಿಕೊಳ್ಳುವುದು ಸೂಕ್ತ. ವಂಚನೆಗಳಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸುವಂತೆ ನಮ್ಮ ಇಲಾಖೆಯಿಂದಲೂ ಕರಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು. ಸಾಮಾಜಿಕ ಜಾಲ ತಾಣಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೂ ಜಾಗೃತಿ ಮೂಡಿಸುವುದಾಗಿ ವಿವರಿಸಿದರು.
ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ತೋಟದಲ್ಲಿ ಗಂಧ ಮತ್ತು ತೇಗದ ಮರಗಳ ಕಳವು ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತನಿಖೆಗೆ ಸೂಚನೆ ನೀಡಲಾಗಿದೆ. ಶಾಸಕರ ತೋಟದಲ್ಲಿ ಈಗಾಗಲೇ 3 ಬಾರಿ ಗಂಧದ ಮರಗಳ ಕಳ್ಳತನ ನಡೆದಿದೆ. ಈ ಹಿನ್ನೆಲೆಯಲ್ಲಿ ಸಿಸಿ ಟಿವಿ ಹಾಕಲು ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಗಾಂಜಾ ಮತ್ತು ಅಕ್ರಮ ಗಣಿಗಾರಿಕೆ ನಿಯಂತ್ರಣ ಹಾಗೂ ಸ್ಫೋಟಕಗಳ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ ಎಂದರು.