ನಗರ ಪಾಲಿಕೆ ಇಬ್ಬರು ಅಧಿಕಾರಿಗಳ ಶ್ರದ್ಧಾಂಜಲಿ ಸಭೆಯಲ್ಲಿ ಮಹಾಪೌರ ವೀರೇಶ್ ಕರೆ
ದಾವಣಗೆರೆ, ಮೇ 19- ಮಹಾನಗರ ಪಾಲಿಕೆಯ ಸಹಾಯಕ ಅಭಿಯಂತರ ಹೆಚ್.ಆರ್. ರಾಮಚಂದ್ರಪ್ಪ ಮತ್ತು ಕಿರಿಯ ಅಭಿಯಂತರ ಮುರುಗೇಂದ್ರಪ್ಪ ಅವರುಗಳು ನಿಧನರಾಗಿದ್ದು, ಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾವಪೂರ್ಣ ಸಂತಾಪ ವ್ಯಕ್ತಪಡಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಪೌರರಾದ ಎಸ್.ಟಿ. ವೀರೇಶ್, ನೌಕರ ಬಂಧುಗಳು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಜಾಗೃತರಾಗಿ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಕರೆ ನೀಡಿದರು.
ದೇಶವೇ ಸಂಕಷ್ಟದಲ್ಲಿದೆ ಅಂತಹ ಪರಿಸ್ಥಿತಿಯನ್ನು ಈ ಕೊರೊನಾ ಎಂಬ ಮಹಾಮಾರಿ ತಂದಿದೆ. ಜೀವದ ಜೊತೆಗೆ ಜೀವನ ಮಾಡಬೇಕಾಗಿದ್ದು, ನೌಕರ ಬಂಧುಗಳು ಎರಡು ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವೀರೇಶ್, ಮೃತರ ಕುಟುಂಬಕ್ಕೆ ಮಿತಕಾಲದಲ್ಲಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಯಾವುದೇ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕೆಂದು ಕರೆ ನೀಡಿದ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಯಾವುದೇ ಕಾರ್ಯಗಳಿದ್ದರೂ ನಿಷ್ಠೆಯಿಂದ ಮಾಡುತ್ತಿದ್ದ ರಾಮಚಂದ್ರಪ್ಪ ಮತ್ತು ಮುರಿಗೇಂದ್ರಪ್ಪ ಅವರುಗಳ ಸೇವೆಯನ್ನು ಪ್ರಶಂಸಿಸಿದರು.
ಪಾಲಿಕೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಗೋವಿಂದರಾಜ್ ಮಾತನಾಡಿ, ಸರ್ಕಾರ ಪಾಲಿಕೆ ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ವಿಶೇಷ ಪ್ಯಾಕೇಜ್ ಘೋಷಿಸಬೇಕು ಕೊರೊನಾ ಬಂದವರಿಗೆ ಪಾಲಿಕೆಯಿಂದ ವೆಚ್ಚ ಭರಿಸುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಲ್.ಡಿ. ಗೋಣೆಪ್ಪ, ಉಮಾ ಪ್ರಕಾಶ್, ಪಾಲಿಕೆ ಸದಸ್ಯರುಗಳಾದ ಕೆ. ಚಮನ್ ಸಾಬ್, ಮಂಜುನಾಥ್, ವೀರೇಶ್, ನರೇಂದ್ರ ಕುಮಾರ್ ಸೇರಿದಂತೆ ಇತರರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.