ಹರಪನಹಳ್ಳಿ, ಮೇ 19- ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇನ್ನೊಂದು ಕಡೆ ಬ್ಲಾಕ್ ಫಂಗಸ್ ಸೋಂಕು ಸಹ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಜನರು ಭಯದ ನೆರಳಲ್ಲಿ ಜೀವನ ನಡೆಸುವ ಸ್ಥಿತಿ ಬಂದಿದೆ. ತಾಲ್ಲೂಕಿನ ನೀಲಗುಂದ ಗ್ರಾಮದ 45 ವರ್ಷದ ವ್ಯಕ್ತಿ ಬ್ಲಾಕ್ ಫಂಗಸ್ ಸೋಂಕಿನಿಂದ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಇನ್ನೂ ಮೂವರಿಗೆ ಬ್ಲಾಕ್ ಫಂಗಸ್ ದೃಢವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ತಾಲ್ಲೂಕಿನ ಅರಸನಾಳು ಗ್ರಾಮದ 40 ವರ್ಷದ ವ್ಯಕ್ತಿ ಕೋವಿಡ್‌ನಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದರಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಉದ್ಗಟ್ಟಿ ಸಣ್ಣ ತಾಂಡಾದ 35 ವರ್ಷದ ವ್ಯಕ್ತಿ ಸಹ ಬ್ಲಾಕ್ ಫಂಗಸ್ ಸೋಂಕಿನಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ.
ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ದಾಖಲಾಗಿರುವ ಹರಪನಹಳ್ಳಿ ಪಟ್ಟಣದ ಮಹಿಳೆಯೊಬ್ಬರಿಗೆ ಬ್ಲಾಕ್ ಫಂಗಸ್ ಲಕ್ಷಣಗಳು ಕಂಡು ಬಂದಿದೆ. ತಾಲ್ಲೂಕಿನಲ್ಲಿ 115 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಪಿ.ಕೆ. ವೆಂಕಟೇಶ್ ತಿಳಿಸಿದ್ದಾರೆ.