ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಮನವಿ
ದಾವಣಗೆರೆ, ಮೇ 19 – ಕೋವಿಡ್ ಸೋಂಕು ಗ್ರಾಮ ಮಟ್ಟದಲ್ಲಿ ವೇಗವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮಗಳನ್ನು ದತ್ತು ಪಡೆದು, ಸತತ 10 ದಿನಗಳ ಕಾಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ರೋಗ ಪತ್ತೆ, ಚಿಕಿತ್ಸೆ ನಿರ್ಧರಣೆಗೆ ಜಿಲ್ಲೆಯಲ್ಲಿರುವ ಖಾಸಗಿ ವೈದ್ಯರು ಸಹಕರಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್ ಸೋಂಕಿತರ ಆರೋಗ್ಯ ಮೇಲ್ವಿಚಾರಣೆ ಮಾಡುವ ಸಂಬಂಧ ವೈದ್ಯರುಗಳ ನಿಯೋಜನೆ ಕುರಿತಂತೆ ಬುಧವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾಸಗಿ ವೈದ್ಯರುಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮಗಳನ್ನು ದತ್ತು ತೆಗೆದುಕೊಂಡು, ಸತತವಾಗಿ 10 ದಿನಗಳ ಕಾಲ ನಿಗದಿತ ಅವಧಿಯಲ್ಲಿ ಸೇವಾ ಮನೋಭಾವದೊಂದಿಗೆ ಸಹಕಾರ ನೀಡಿದಲ್ಲಿ, ಕೋವಿಡ್ ಅನ್ನು ಗ್ರಾಮ ಮಟ್ಟದಲ್ಲಿ ತಡೆಗಟ್ಟಲು ಸಾಧ್ಯವಿದೆ. ಗ್ರಾಮಗಳು ಉಳಿದರೆ, ಇಡೀ ದೇಶ ಉಳಿದಂತೆ. ಯಾವುದೇ ಗ್ರಾಮದಲ್ಲಿ 15 ರಿಂದ 20 ಜನರಲ್ಲಿ ಸೋಂಕು ಇರುವುದು ದೃಢಪಟ್ಟಲ್ಲಿ ಆಯಾ ಗ್ರಾಮದ ಶಾಲೆ ಅಥವಾ ಸಮುದಾಯ ಭವನದಲ್ಲಿಯೇ ಕೋವಿಡ್ ಕೇರ್ ಸೆಂಟರ್ ತೆರೆದು, ಸೋಂಕಿತರಿಗೆ ಸೂಕ್ತ ವೈದ್ಯಕೀಯ ನೆರವು ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಹೇಳಿದರು.
ಜಿಲ್ಲೆಯ ಗ್ರಾಮಗಳಲ್ಲಿ ಸರ್ಕಾರಿ ವೈದ್ಯರು, ಅಂಗನವಾಡಿ, ಆಶಾ ಕಾರ್ಯಕರ್ತರು, ಕಂದಾಯ ಇಲಾಖೆಯ ಸಿಬ್ಬಂದಿಗಳು ಈಗಾಗಲೇ ಲಭ್ಯರಿದ್ದು, ಇದರೊಂದಿಗೆ ಖಾಸಗಿ ವೈದ್ಯರನ್ನು ಒಳಗೊಂಡ ತಂಡವನ್ನು ರಚಿಸಲಾಗುವುದು. ಈ ತಂಡಕ್ಕೆ ಅಗತ್ಯ ಕೋವಿಡ್ ಕಿಟ್, ಸ್ಥಳದಲ್ಲಿಯೇ ಸೋಂಕು ಪತ್ತೆಹಚ್ಚಲು ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್, ಔಷಧಿಗಳು ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಲಾಗುವುದು. ಅಲ್ಲದೆ ವಾಹನದ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು ಎಂದರು.
ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮಗಳಲ್ಲಿ ವೇಗವಾಗಿ ವ್ಯಾಪಿಸುತ್ತಿದೆ. ಲಾಕ್‍ಡೌನ್ ಪರಿಣಾಮವಾಗಿ ನಗರ, ಪಟ್ಟಣಗಳಿಂದ ಗ್ರಾಮಗಳಿಗೆ ಹಿಂದಿರುಗಿದ ಜನರಿಂದ ಸೋಂಕು ವ್ಯಾಪಕವಾಗುತ್ತಿದೆ. ಗ್ರಾಮಗಳಲ್ಲಿ ಜನರು ತಪ್ಪು ಕಲ್ಪನೆ ಹಾಗೂ ಭೀತಿಯಿಂದ ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೆ, ರೋಗ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರು ರೋಗವನ್ನು ಬೇರೆಯವರಿಗೆ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಕೋವಿಡ್ ಸೋಂಕಿನ ಕುರಿತು ಗ್ರಾಮೀಣ ಜನರಲ್ಲಿ ಸರಿಯಾದ ತಿಳುವಳಿಕೆ, ಅರಿವು ಮೂಡಿಸಬೇಕಿದೆ, ಇದರ ಜೊತೆಗೆ ಅವರಲ್ಲಿನ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಅವರಲ್ಲಿ ಚಿಕಿತ್ಸೆಯ ಬಗ್ಗೆ ಹಾಗೂ ಸರ್ಕಾರ ನಿಮ್ಮೊಂದಿಗಿದೆ ಎನ್ನುವ ವಿಶ್ವಾಸವನ್ನು ಮೂಡಿಸಬೇಕಿದೆ ಇದಕ್ಕಾಗಿ ಜಿಲ್ಲೆಯ ಎಲ್ಲ ಖಾಸಗಿ ವೈದ್ಯರ ಸಹಕಾರ ಈಗ ಅತ್ಯಗತ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ್ ಮಹಾಂತೇಶ್ ಗ್ರಾಮಗಳ ದತ್ತು ಸ್ವೀಕಾರ ಕುರಿತ ಕಾರ್ಯಕ್ರಮದ ವಿವರಣೆ ನೀಡಿ, ಖಾಸಗಿ ವೈದ್ಯರು ಕನಿಷ್ಟ 2 ತಿಂಗಳು ಗ್ರಾಮಗಳ ದತ್ತು ಸ್ವೀಕರಿಸಬೇಕು. ಖಾಸಗಿ ಹಾಗೂ ಸರ್ಕಾರಿ ವೈದ್ಯರನ್ನು ಒಳಗೊಂಡ ನಿಯೋಜಿತ ತಂಡಗಳು ದತ್ತು ಸ್ವೀಕೃತ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೋಂಕು ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ, ಅವರ ಪ್ರಾಥಮಿಕ ಸಂಪರ್ಕಿತರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು, ರೋಗ ಲಕ್ಷಣಗಳುಳ್ಳ ಜನರಿಗೆ ರ್ಯಾಪಿಡ್ ಟೆಸ್ಟ್ ಮಾಡಬೇಕು.
ಸೋಂಕು ದೃಢಪಟ್ಟವರ ಆರೋಗ್ಯ ಸ್ಥಿತಿಗತಿ ಹಾಗೂ ಸೋಂಕಿನ ತೀವ್ರತೆಗೆ ಅನುಗುಣವಾಗಿ ಹೋಂ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕುರಿತು ನಿರ್ಧರಿಸಬೇಕು. ಗ್ರಾಮೀಣರು ತಪ್ಪು ತಿಳುವಳಿಕೆಯಿಂದ ಮಾರ್ಗಸೂಚಿ ಪಾಲಿಸದೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಕೋವಿಡ್ ಸೋಂಕು ಲಕ್ಷಣ ಪ್ರಾರಂಭವಾಗಿ 5 ದಿನಗಳ ಒಳಗಾಗಿ ಸೋಂಕಿತರಿಗೆ ಚಿಕಿತ್ಸೆ ಪ್ರಾರಂಭವಾಗಬೇಕು, ಇಲ್ಲದಿದ್ದರೆ ಅಂತಹ ವ್ಯಕ್ತಿಯ ಜೀವಕ್ಕೇ ಅಪಾಯ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿ, ಸರ್ಕಾರಿ ವ್ಯವಸ್ಥೆಯೊಂದಿಗೆ ಖಾಸಗಿ ವೈದ್ಯರ ನೆರವು ಅತ್ಯಗತ್ಯವಾಗಿದೆ, ಖಾಸಗಿ ವೈದ್ಯರು ಇದಕ್ಕೆ ಸಹಕರಿಸುವ ಮೂಲಕ ಜಿಲ್ಲೆಯನ್ನು ಕೋವಿಡ್ ಸೋಂಕಿನಿಂದ ಮುಕ್ತಗೊಳಿಸಲು ಮುಂದಾಗಬೇಕು. ಇದಕ್ಕಾಗಿ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲಾಗುವುದು ಎಂದರು.
ಜಿಲ್ಲೆಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸೋಮಶೇಖರ್, ಗ್ರಾಮಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಸೂಕ್ತ ರೂಪರೇಷೆಗಳನ್ನು ಕೈಗೊಂಡಲ್ಲಿ, ಇದಕ್ಕೆ ಜಿಲ್ಲೆಯ ಎಲ್ಲ ವೈದ್ಯರು ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್, ಸೇರಿದಂತೆ ವಿವಿಧ ಅಧಿಕಾರಿಗಳು, ನಗರದ ವಿವಿಧ ಆಸ್ಪತ್ರೆಗಳ ವೈದ್ಯರುಗಳು ಉಪಸ್ಥಿತರಿದ್ದರು.