ದಾವಣಗೆರೆ, ಮೇ 19- ನಗರದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ರುವ ಕೋವಿಡ್ ಕೇರ್ ನಿರ್ವಹಣೆ ಬಗ್ಗೆ ಶಾಮನೂರು ಹಾಗೂ ಜೆ.ಹೆಚ್. ಪಟೇಲ್ ಬಡಾವಣೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿಗೆ ಬರುವ ರೋಗಿಗಳಿಗೆ ಊಟ-ತಿಂಡಿ ಕೊಡಲು ಬರುವ ಸಂಬಂಧಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಯಾರೊಬ್ಬರೂ ಮಾಸ್ಕ್ ಧರಿಸಿರುವುದಿಲ್ಲ. ಜೆ.ಹೆಚ್. ಪಟೇಲ್ ಬಡಾವಣೆ ಹಾಗೂ ಶಾಮನೂರು ಗ್ರಾಮಗಳಲ್ಲಿ ಹಾಗೆಯೇ ಸುತ್ತಾಡುವುದರಿಂದ ಸೋಂಕು ಇಲ್ಲಿನವರಿಗೆ ಹರಡುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಆರೋಪ.
ಕೋವಿಡ್ ಕೇರ್ ಸೆಂಟರ್ನಲ್ಲಿರುವ ಕೆಲ ರೋಗಿಗಳು ರಾತ್ರಿ ವೇಳೆ ಆವರಣದಲ್ಲಿಯೇ ಧೂಮಪಾನ ಮಾಡುತ್ತಾ ಓಡಾಡುತ್ತಿರುತ್ತಾರೆ. ಹಿಂದಿಗಿಂತಲೂ ಈ ಬಾರಿ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಮಾರ್ಗಸೂಚಿ ಪಾಲಿಸದ ರೋಗಿಗಳಿಂದ ನಮಗೆ ಆತಂಕವಾಗಿದೆ ಎನ್ನುತ್ತಾರೆ ಸ್ಥಳೀಯರು. ಇತ್ತೀಚಿನ ಕೆಲ ದಿನಗಳಿಂದ ಶಾಮನೂರಿನಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ ಎಂಬ ಸುದ್ದಿ ಹರಡಿದ್ದು, ಈ ಸುದ್ದಿಯೂ ಸಹ ಸ್ಥಳೀಯರ ಆತಂಕ ಹೆಚ್ಚಿಸಿದೆ. ಕೂಡಲೇ ಜಿಲ್ಲಾಡಳಿತ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ರೋಗಿಗಳು ಹೊರ ಬಾರದಂತೆ ಹಾಗೂ ಇಲ್ಲಿನ ರೋಗಿಗಳನ್ನು ಕಾಣಲು ಸಂಬಂಧಿಕರು, ಸ್ನೇಹಿತರು ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.