ದಾವಣಗೆರೆ, ಮೇ 19- ಸಂಸದ ಜಿ.ಎಂ.ಸಿದ್ದೇಶ್ವರ ಅವರು ತಮ್ಮ ಕುಟುಂಬದ ವತಿಯಿಂದ 1.59 ಕೋಟಿ ರೂ. ವೆಚ್ಚದ ಮೂರು ಆಕ್ಸಿಜನ್ ಜನರೇಟರ್ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದ್ದಾರೆ.
ಜಿ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಬಲ್ ಟ್ರಸ್ಟ್, ಜಿ.ಎಂ. ಸೌಹಾರ್ದ ಬ್ಯಾಂಕ್ ಹಾಗೂ ಜಿ.ಎಂ.ಗ್ರೂಪ್ ವತಿಯಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಆಸ್ಪತ್ರೆ, ಜಗಳೂರು ತಾಲ್ಲೂಕು ಆಸ್ಪತ್ರೆ, ಹಾಗೂ ಚಿತ್ರದುರ್ಗ ಜಿಲ್ಲಾಸ್ಪತ್ರೆ ಹೀಗೆ 3 ಆಕ್ಸಿಜನ್ ಜನರೇಟರ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಒಂದು ಆಕ್ಸಿಜನ್ ಜನರೇಟರ್ ಪ್ರತಿ ನಿಮಿಷಕ್ಕೆ 333 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದು, ಒಂದು ಆಕ್ಸಿಜನ್ ಜನರೇಟರ್ನಿಂದ 52 ಜನರಿಗೆ ಏಕ ಕಾಲದಲ್ಲಿ ಆಕ್ಸಿಜನ್ ಸೌಲಭ್ಯ ಸಿಗಲಿದೆ. ಒಟ್ಟಾರೆ ಈ 3 ಆಕ್ಸಿಜನ್ ಜನರೇಟರ್ಗಳಿಂದ 156 ಜನರಿಗೆ ಆಕ್ಸಿಜನ್ ಸೌಲಭ್ಯ ದೊರೆಯಲಿದೆ. ಇದರಿಂದಾಗಿ ಜಿಲ್ಲಾ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ. ಮುಂದಿನ ಮೂರ್ನಾಲ್ಕು ವಾರಗಳಲ್ಲಿ ಈ ಆಕ್ಸಿಜನ್ ಘಟಕಗಳು ಕೆಲಸ ಪ್ರಾರಂಭ ಮಾಡಲಿವೆ.