ಚಿತ್ರದುರ್ಗ, ಮೇ 18- ಮುರುಘಾ ಮಠ ಕೊಡಮಾಡುವ 2019ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಹಾಗೂ 2020 ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷ, ಹೆಸರಾಂತ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ಅವರು ಭಾಜನರಾಗಿದ್ದಾರೆ. ಪ್ರಶಸ್ತಿ ಯು ಐದು ಲಕ್ಷ ನಗದು, ಪಾರಿತೋಷಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಇರುವುದರಿಂದ ಮುಂದಿನ ತಿಂಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶುಕ್ರವಾರ ಸುದ್ದಿಗಾರರಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಪಂಡಿತ್ ರಾಜೀವ್ ತಾರಾನಾಥ್ ಪರಿಚಯ : ಅಂತರರಾಷ್ಟ್ರೀಯ ಖ್ಯಾತಿಯ ರಾಜೀವ್ ತಾರಾನಾಥ್ ಜಗತ್ತಿನ ಅತ್ಯಂತ ಉತ್ಕೃಷ್ಟ ಸರೋದ್ ವಾದಕರಲ್ಲಿ ಅಗ್ರಗಣ್ಯರು. ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಶಿಷ್ಯರಾಗಿದ್ದ ಅವರು ಸಾಂಪ್ರದಾಯಿಕ ಹಿಂದೂಸ್ತಾನಿ ಸಂಗೀತ ದಲ್ಲಿನ ಆಳ ಹಾಗೂ ಭಾವನಾ ಲೋಕದ ತೀಕ್ಷ್ಣತೆಯನ್ನು ತಮ್ಮ ವಾದನದಲ್ಲಿ ಸಮ್ಮಿಶ್ರಗೊಳಿಸುವ ಸಾಧಕರಾಗಿದ್ದಾರೆ.
ಡಾ. ಕೆ. ಕಸ್ತೂರಿ ರಂಗನ್ ಪರಿಚಯ : ಡಾ. ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಅವರು ಬಾಹ್ಯಾಕಾಶ ಖ್ಯಾತ ವಿಜ್ಞಾನಿಯಾಗಿದ್ದು, 2003 ರವರೆಗೆ 9 ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ನೇತೃತ್ವ ವಹಿಸಿದ್ದರು. ಇವರು ರಾಜ್ಯಸಭಾ ಸದಸ್ಯರಾಗಿದ್ದರು. ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿದ್ದಾರೆ.