ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್
ದಾವಣಗೆರೆ, ಮೇ 18- ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೂ ಕೊರೊನಾ ನಿಭಾಯಿಸುವಲ್ಲಿ ಸರ್ಕಾರದ ಪ್ರಯತ್ನವನ್ನು ಅಲ್ಲಗಳೆಯುವಂತಿಲ್ಲ. ಆದರೆ ಕಾಂಗ್ರೆಸ್ ಸೇರಿದಂತೆ, ವಿಪಕ್ಷ ನಾಯಕರು ಅಪಪ್ರಚಾರದ ರಾಜಕಾರಣದಲ್ಲಿ ತೊಡಗಿ, ಜನರಲ್ಲಿ ಗೊಂದಲ ಮೂಡಿಸುವುದು ಶೋಭೆ ತರುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಆಕ್ಷೇಪಿಸಿದರು.
ಕೊರೊನಾದಂತಹ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಲಸಿಕೆ ಕುರಿತಂತೆ ಅಪಪ್ರಚಾರ ಮಾಡಿದ ಕಾಂಗ್ರೆಸ್ ನಾಯಕರೇ ಎರಡು ಡೋಸ್ ತೆಗೆದುಕೊಂಡು ಸುರಕ್ಷಿತರಾಗಿ ದ್ದಾರೆ. ಈಗ ಲಸಿಕಾ ಕೇಂದ್ರಗಳ ಮುಂದೆ ಫೋಟೋ ತೆಗೆಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಬೇಕಿರುವ ಸಮಯದಲ್ಲಿ ಕೊರೊನಾ ವಾರಿಯರ್ಗಳನ್ನು ಅವಮಾನಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯ ಸಂಸದರು, ಶಾಸಕರು ಸಹ ತಂತಮ್ಮ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿಗರು ದಿನನಿತ್ಯ ಸುದ್ದಿಗೋಷ್ಠಿ ನಡೆಸಿ, ಟೀಕಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಸಲಹೆ, ಮಾರ್ಗದರ್ಶನ ನೀಡಲಿ ಎಂದು ಹೇಳಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಕೋವಿಡ್ನಿಂದ ದೇಶವೇ ಸಂಕಷ್ಟದಲ್ಲಿದೆ. ಹೀಗಿರುವಾಗ ರಾಜಕೀಯ ಮಾಡುವ ಸಮಯ ಇದಲ್ಲ. ಶೀಘ್ರವೇ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಎದುರಾಗಲಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ತಮ್ಮ ಶಕ್ತಿ ಪ್ರದರ್ಶನ ಮಾಡಲಿ ಎಂದು ಸವಾಲು ಹಾಕಿದರು.
ಲಸಿಕೆ ತರಿಸಲು ಹಣ ಕೊಡುವುದಾಗಿ ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಶಾಸಕರು ಹೇಳಿದ್ದು, ಕಳೆದ 25 ವರ್ಷ ಆ ಭಾಗವನ್ನು ಪ್ರತಿನಿಧಿಸುತ್ತಿರುವ ಡಾ. ಶಾಮನೂರು ಶಿವಶಂಕರಪ್ಪ ಅವರು, ಆ ಕ್ಷೇತ್ರದಲ್ಲಿ ಒಳ್ಳೆಯದೊಂದು ಆಸ್ಪತ್ರೆ ಕಟ್ಟಿಸಿಲ್ಲ. ತಮ್ಮ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ಗೆ ಕೇಳಿದರೂ ಜಿಲ್ಲಾಡಳಿತಕ್ಕೆ ಕೊಟ್ಟಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಪಕ್ಷದ ಮುಖಂಡರಾದ ಯಶವಂತರಾವ್ ಜಾಧವ್, ಡಿ.ಎಸ್. ಶಿವಶಂಕರ್, ಮಂಜಾನಾಯ್ಕ, ಹೆಚ್.ಪಿ. ವಿಶ್ವಾಸ್, ಪ್ರವೀಣ ಜಾಧವ್ ಇದ್ದರು.