ದಾವಣಗೆರೆ, ಮೇ 18- ಕೊರೊನಾ ಹಿನ್ನೆಲೆಯಲ್ಲಿ ಆಗಿರುವ ಲಾಕ್ ಡೌನ್ ಪರಿಣಾಮ ಬ್ಯೂಟಿ ಪಾರ್ಲರ್ ನಡೆಸುವವರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀಮತಿ ಕವಿತಾ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಸಂಬಂಧ ಜನಪ್ರತಿನಿಧಿಗಳಿಗೆ, ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ದಿನಸಿ ಕಿಟ್ ಹೊರತುಪಡಿಸಿದರೆ, ಇನ್ನಾವುದೇ ಸಹಾಯ ದೊರೆಯದಿರುವ ಬಗ್ಗೆ ಅವರು ಖೇದ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಕೊರೊನಾ ಸಂದರ್ಭದಲ್ಲಿ ಬ್ಯೂಟಿ ಪಾರ್ಲರ್ ನಡೆಸುವವರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಈಗ ಮತ್ತೊಮ್ಮೆ ಎರಡನೇ ಅಲೆಯು ಜೀವನ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ.
ಶುಭ ಸಮಾರಂಭಗಳು ನಡೆಯಬೇಕಾದಂತಹ ಸಮಯದಲ್ಲಿ ಮತ್ತೆ ಲಾಕ್‌ಡೌನ್ ಆಗಿದೆ. ಈ ವೃತ್ತಿ ಪರಸ್ಪರ ಅಂತರ ಕಾಯ್ದುಕೊಂಡು ಮಾಡುವ ಕೆಲಸವಲ್ಲ. ಸರ್ಕಾರ ಈಗಲಾದರೂ ನೊಂದ ಮಹಿಳಾ ವೃತ್ತಿ ವೃಂದದವರ ಬಗ್ಗೆ ಗಮನಹರಿಸುವಂತೆ ಅವರು ಒತ್ತಾಯಿಸಿದ್ದಾರೆ.