ದಾವಣಗೆರೆ, ಜು.29- ಭದ್ರಾ ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರನ್ನೇ ಮುಂದು ವರಿಸಬೇಕೆಂದು ಭದ್ರಾ ಯೋಜನಾ ಮಟ್ಟದ ನೀರು ಬಳೆಕೆದಾರರ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕ ತೇಜಸ್ವಿ ವಿ. ಪಟೇಲ್ ಅವರು ನೂತನ ಸಿ.ಎಂ. ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿರುವ ಪಟೇಲ್ ಅವರು ಎಲ್ಲಾ ನೀರಾವರಿ ಯೋಜನೆಗಳಂತೆ ಭದ್ರಾ ಯೋಜನೆಯೂ ಕೊನೆಯ ಭಾಗದ ರೈತರ ಸಮಸ್ಯೆಯಿಂದ ಹೊರತಾಗಿರಲಿಲ್ಲ. ಹೀಗಿದ್ದರೂ ಪವಿತ್ರ ರಾಮಯ್ಯ ಅವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದರಿಂದ ಹಲವು ವರ್ಷಗಳಿಂದ ನೀರಿನಿಂದ ವಂಚಿತರಾಗಿದ್ದ ಕೊನೆಯ ಭಾಗದ ರೈತರಿಗೆ ಕಳೆದ ಹಂಗಾಮಿನಲ್ಲಿ ಸಮರ್ಪಕವಾಗಿ ನೀರು ತಲುಪಿ, ಸಮೃದ್ಧ ಬೆಳೆ ಬೆಳೆದಿದ್ದಾರೆ.
ಇದೀಗ ಮುಖ್ಯಮಂತ್ರಿ ಬದಲಾವಣೆ ಆಗಿರುವುದರಿಂದ ಸಹಜವಾಗಿಯೇ ನಿಗಮ ಮಂಡಳಿಗಳಿಗೂ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಪವಿತ್ರ ರಾಮಯ್ಯ ಅವರನ್ನು ಬದಲಾಯಿಸದೆ ಭದ್ರಾ ಕಾಡಾ ಅಧ್ಯಕ್ಷರನ್ನಾಗಿ ಮುಂದುವರೆಸುವಂತೆ ತೇಜಸ್ವಿ ಪಟೇಲ್ ಕೋರಿದ್ದಾರೆ.