ದಾವಣಗೆರೆ, ಮಾ.12- ಜಮೀನು ಅಳತೆ, ಹದ್ದುಬಸ್ತಿಗಾಗಿ ಸಾರ್ವಜನಿಕರು ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದರು, ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ ಆರೋಪಿಸಿದ್ದಾರೆ.
ಕಳೆದ ಒಂದು ತಿಂಗಳುಗಳಿಂದ ಸುಮಾರು 2000 ಖಾಸಗಿ ಲೈಸೆನ್ಸ್ ಸರ್ವೆಯರ್‌ಗಳು ತಮ್ಮ ಸೇವಾ ಭದ್ರತೆಗಾಗಿ ಮುಷ್ಕರ ನಡೆಸುತ್ತಿದ್ದರೂ ಅವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಬದಲು ಸರ್ಕಾರ ಜಾಣ ಕಿವುಡು ತೋರುತ್ತಿದೆ.
ಸರ್ಕಾರಿ ಸರ್ವೆಯರ್‌ಗಳ ಸಂಖ್ಯೆ ಕಡಿಮೆ ಇದ್ದು, ಅರ್ಜಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಲೈಸೆನ್ಸ್ ಸರ್ವೆಯರ್‌ಗಳನ್ನು ನೇಮಿಸಿಕೊಂಡು ರೈತರಿಂದ ಪಡೆಯುವ 1200 ರೂ. ಹಣದಲ್ಲಿ 800 ರೂ.ಗಳನ್ನು ಖಾಸಗಿ ಸರ್ವೆಯರ್ ಗಳಿಗೆ ನೀಡಿ ಸರ್ವೆ ಮಾಡಿಸಲಾಗುತ್ತಿತ್ತು.
ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸರ್ವೆಯರ್‌ಗಳು ತಮ್ಮ ಬೇಡಿಕೆಗಳನ್ನು ಹೊತ್ತು ಮುಷ್ಕರ ನಡೆಸುತ್ತಿದ್ದರೂ ಸಹ ಯಾವುದೇ ರೀತಿಯ ಮಾತುಕತೆ ನಡೆಸದೆ ಸುಮ್ಮನಿರುವ ದಪ್ಪ ಚರ್ಮದ ಸರ್ಕಾರ ರೈತರಿಗೆ ಆಗುವ ತೊಂದರೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.