ಸಾಸಲವಾಡ : ನಾರುತ್ತಿರುವ ಕಾಲುವೆ

ಕೂಡ್ಲಿಗಿ, ಮಾ.11- ತಾಲ್ಲೂಕಿನ ಹಿರೇಹೆಗ್ಡಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾಸಲವಾಡ ಗ್ರಾಮದಲ್ಲಿ ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಮಿಷನ್ ಹಳ್ಳ ಹಿಡಿದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 

ಗ್ರಾಮದ ಮಧ್ಯದಲ್ಲಿಯೇ ಬಹುತೇಕ ಕಡೆ ತಿಪ್ಪೆಗಳಿದ್ದು, ಅವು ಮಕ್ಕಳ ಶೌಚಾಲಯಗಳಾಗಿವೆ ಎನ್ನುತ್ತಾರೆ ಗ್ರಾಮಸ್ಥರು. ಮನೆಯಂಗಳದಲ್ಲಿನ ಕಾಲುವೆಗಳನ್ನು ಕೆಲ ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಕಾಲುವೆಗಳು ಕಸ ತುಂಬಿ ದುರ್ನಾತ ಬೀರುತ್ತಿವೆ, ಹುಳುಗಳಿಂದ ತುಂಬಿವೆ. ಗ್ರಾಮದ ಬಹುತೇಕ ಕಡೆಗಳಲ್ಲಿ ಮನೆಯಂಗಳದಲ್ಲಿಯೇ ತಿಪ್ಪೆಗಳಿವೆ ಮತ್ತು ಮಕ್ಕಳು ತಿಪ್ಪೆಗಳಲ್ಲಿಯೇ ಶೌಚಕ್ಕೆ ಕೂಡುತ್ತಿದ್ದಾರೆ. 

ಪ್ರಧಾನಿಯವರ ಸ್ವಚ್ಛ ಭಾರತ ಮಿಷನ್‌ಅನ್ನು ಇಲ್ಲಿ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಿಂಚಿತ್ತೂ ಗೌರವಿಸುತ್ತಿಲ್ಲ. ಕೇವಲ ಲೆಕ್ಕ-ಪತ್ರಗಳಿಗೆ ಸ್ವಚ್ಛತೆ ಅಭಿವೃದ್ಧಿ ತೋರಿಸುತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಗ್ರಾಪಂನಲ್ಲಿ ಹಲವು ಭಾರೀ ಹಗರಣಗಳು ಜರುಗಿವೆ. ಅವುಗಳನ್ನು ಶೀಘ್ರದಲ್ಲಿಯೇ ಬಯಲಿಗೆಳೆದು, ಮಾಧ್ಯಮಗಳ ಮುಂದೆ, ಎಸಿಬಿಯವರಿಗೆ ದೂರು ನೀಡಲಾಗುವು ದೆಂದು ಕೆಲ ಗ್ರಾಮಸ್ಥರು ಹಾಗು ಪ್ರಜ್ಞಾವಂತ ಯುವಕರು ದೂರಿದ್ದಾರೆ. ಕಾಲುವೆ, ತಿಪ್ಪೆಗಳು ಕೊಳೆತು ನಾರುತಿದ್ದು, ಇದರಿಂದಾಗಿ ಬಹುತೇಕ ಗ್ರಾಮಸ್ಥರಿಗೆ ರೋಗ ರುಜಿನಗಳು ಹಬ್ಬಿವೆ. ಗ್ರಾಮದ ಜನರು ನಿತ್ಯ ಅನಾರೋಗ್ಯದಿಂದ ಬಳಲುತ್ತಿದ್ದು ಗ್ರಾಮದ ಬಹುತೇಕ ಗ್ರಾಮಸ್ಥರು ಚಿಕಿತ್ಸೆಗೆಂದು ಆಸ್ಪತ್ರೆಗೆ  ಅಲೆದಾಡು ವಂತಾಗಿದೆ ಎಂದು ಗ್ರಾಮದ ಹಿರಿಯ ಮರುಳಸಿದ್ದಪ್ಪ ಸೇರಿದಂತೆ, ಹಲವು ಹಿರಿಯರು ದೂರಿದ್ದಾರೆ.

ಕಾಲುವೆ ನೀರು ನಿಂತ ಗುಂಡಿಗಳು ನಿರ್ಮಾಣವಾಗಿವೆ. ಪರಿಣಾಮ ಕೆಲ ಮನೆಗಳ ಪಾಯ ಕುಸಿಯುತ್ತಿವೆ. ಆಗೋ-ಈಗೋ ಬೀಳುವಂತಾಗಿವೆ. ಕಾರಣ ಶೀಘ್ರವೇ ಹೊಸದಾಗಿ ಕಾಲುವೆಯನ್ನು ಅಭಿವೃದ್ಧಿಪಡಿಸಬೇಕಿದೆ. ಕಾಲುವೆ ನೀರು ಗ್ರಾಮದಿಂದ ಹೊರಗೆ ಹರಿದು ಹೋಗುವಂತೆ ಶೀಘ್ರವೇ ಕ್ರಮ ಜರುಗಿಸಬೇಕಿದೆ ಮತ್ತು ಕಾಲುವೆ ಸ್ವಚ್ಛಗೊಳಿಸಬೇಕು. ಮನೆಯಂಗಳದಲ್ಲಿರುವ ಎಲ್ಲಾ ತಿಪ್ಪೆಗಳನ್ನು ಗ್ರಾಮದಿಂದ ಶೀಘ್ರವೇ ಆಚೆಗೆ ಹಾಕುವ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ. 

ಸಂಬಂಧಿಸಿದ ಗ್ರಾಪಂ ‌ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ, ತಾಪಂ ಅಧಿಕಾರಿಗಳಿಗೂ ಹೇಳಲಾಗಿದೆ. ಅವರೂ ಸ್ಪಂದಿಸದೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು  ಗ್ರಾಮಸ್ಥರು ದೂರಿದ್ದಾರೆ.

ಹೀಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಲ್ಲಿ ಸಾಕ್ಷಿ, ಪುರಾವೆಗಳ ಸಮೇತ ದೂರು ನೀಡಲ‍ಾಗುವುದು ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಲಾಗುವುದು ಎಂದು ಗ್ರಾಮದ ಹಿರಿಯ ಮರುಳಸಿದ್ದಪ್ಪ ಸೇರಿದಂತೆ, ಗ್ರಾಮದ ಹಿರಿಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು ತಿಳಿಸಿದ್ದಾರೆ.

error: Content is protected !!