ಉಚ್ಛ ನ್ಯಾಯಾಲಯ ತಡೆ
ರಾಣೇಬೆನ್ನೂರು, ಮಾ.12- ಮೆಡ್ಲೇರಿ ಶ್ರೀ ಬೀರೇಶ್ವರ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದ್ದ ಸರ್ಕಾರದ ಆದೇಶಕ್ಕೆ ಧಾರವಾಡ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಸಮಿತಿಯ ಕಾರ್ಯದರ್ಶಿ ಡಿಳ್ಳೆಪ್ಪ ಅಣ್ಣೇರ ತಿಳಿಸಿದ್ದಾರೆ.
ಸಹಕಾರಿ ಇಲಾಖೆಯಲ್ಲಿ ನೋಂದಣಿ ಆದ ನಮ್ಮ ಸಮಿತಿಯನ್ನು ಇಲ್ಲಿನ ಶಾಸಕ ಅರುಣ ಕುಮಾರ ಪೂಜಾರ ಹಾಗೂ ಸಚಿವ ಶಂಕರ್ ಅವರು ಕಂದಾಯ ಇಲಾಖೆ ಅಧಿಕಾರಿಗಳಿಂದ ಆಡಳಿತಾಧಿಕಾರಿ ನೇಮಿಸಿ, ಆರು ತಿಂಗಳೊಳಗೆ ಚುನಾವಣೆ ನಡೆಸಿ ಹೊಸ ಸಮಿತಿಗೆ ಆಡಳಿತ ವಹಿಸುವಂತೆ ಹೊರಡಿಸಿದ ಸರ್ಕಾರದ ಆದೇಶವನ್ನು ನ್ಯಾಯಾಲಯ ತಡೆ ಹಿಡಿದಿದೆ ಎಂದು ಡಿಳ್ಳೆಪ್ಪ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಕಮಿಟಿಯವರು ಯಾವುದೇ ಅವ್ಯವಹಾರ ಮಾಡಿಲ್ಲ. ಕಾನೂನು ಬಾಹಿರ ಆಡಳಿತ ನಡೆಸಿಲ್ಲ. ಅಲ್ಲದೆ ಶಿವರಾತ್ರಿ ಜಾತ್ರೆಯ ಈ ಸಮಯದಲ್ಲಿ ರಾಜಕೀಯ ಕುತಂತ್ರ ನಡೆಸಿ, ಅಪಾರ ಸಂಖ್ಯೆಯ ಸ್ವಾಮಿಯ ಭಕ್ತರ ಮನದಲ್ಲಿ ಅಶಾಂತಿ ಮೂಡಿಸಿದ ಶಾಸಕರು ಹಾಗೂ ಸಚಿವರು ತಮ್ಮ ಮುಂಬರುವ ಚುನಾವಣೆಗಳಲ್ಲಿ ಹೀನಾಯ ಸೋಲಿಗೆ ದಾರಿ ಮಾಡಿಕೊಂಡಿದ್ದಾರೆ. ಈಗಲೂ ಸಹ ಈರ್ವರೂ ತಮ್ಮ ತಪ್ಪು ಅರಿತುಕೊಳ್ಳದಿದ್ದಲ್ಲಿ ಈಗಿನಿಂದಲೇ ಇವರ ವಿರುದ್ಧ ಹೋರಾಟ ಪ್ರಾರಂಭಿಸಲಾಗುವುದು ಎಂದು ಡಿಳ್ಳೆಪ್ಪ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರವೀಂದ್ರಗೌಡ ಪಾಟೀಲ, ಸಮಿತಿ ಅಧ್ಯಕ್ಷ ಗೋರಜ್ಜ ಗೊರಮಾಳರ, ಉಪಾಧ್ಯಕ್ಷ ನಾಗಪ್ಪ ಪೂಜಾರ, ಸದಸ್ಯರಾದ ಬೀರೇಶ ಕೂನಬೇವು, ವಿಷ್ಣಪ್ಪ ಪೂಜಾರ, ಮಹಾಲಿಂಗಪ್ಪ ಹಾಡೋರ ಇನ್ನಿತರರಿದ್ದರು.