ದಾವಣಗೆರೆ, ಮೇ 17- ಜಿಲ್ಲೆಯಲ್ಲಿ ಬಿಜೆಪಿಯ 5 ಶಾಸಕರಿದ್ದು, ಅವರ ಪೈಕಿ ನಾಲ್ವರು ಸಚಿವ ದರ್ಜೆಯ ನಿಗಮ, ಮಂಡಳಿಗೆ ಅಧ್ಯಕ್ಷರಾಗಿದ್ದಾರೆ. ಇದಲ್ಲದೇ ಸಂಸದರು, ಇಬ್ಬರು ಎಂಎಲ್‍ಸಿಗಳಿದ್ದರೂ ಸಹ ಅವರೆಲ್ಲಾ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎಂಬಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಅವರು ಇಂದಿಲ್ಲಿ ದೂರಿದ್ದಾರೆ.
ತಿಂಗಳಿಗೊಮ್ಮೆ ಪಿಕ್‍ನಿಕ್ ಸ್ಪಾಟಿಗೆ ಬಂದು ಹೋಗುವ ಹಾಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಬಂದು ಹೋಗುತ್ತಾರೆ. ಇಂತಹ ಸಚಿವರಿಂದ ಜಿಲ್ಲೆಗೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪಿಕ್‍ನಿಕ್‍ಗೆ ಬಂದು ಹೋದ ಹಾಗೆ ಬಂದು ಹೋದರೆ ಅವರು ಇನ್ನೇನು ಮಾಡಲು ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಬಡ ಜನರ ಪ್ರಾಣ ಉಳಿಸಲು ಸೂಕ್ತ ಬೆಡ್‍ಗಳ ವ್ಯವಸ್ಥೆ, ಐಸಿಯು ಬೆಡ್‍ಗಳ ವ್ಯವಸ್ಥೆ, ವೆಂಟಿಲೇಟರ್‍ಗಳ ವ್ಯವಸ್ಥೆ, ಆಂಬ್ಯುಲೆನ್ಸ್ ವ್ಯವಸ್ಥೆ, ತಜ್ಞ ವೈದ್ಯರ ಮತ್ತು ಸಿಬ್ಬಂದಿಗಳ ವ್ಯವಸ್ಥೆ ಹಾಗೂ ಸ್ಮಶಾನ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿಯವರು ಪುಕ್ಸಟ್ಟೆ ಉಪದೇಶ ನೀಡುವುದರಲ್ಲಿ ನಿಸ್ಸೀಮರು. ಅವರು ಉಪದೇಶಗಳನ್ನು ನೀಡುವುದನ್ನು ಬಿಟ್ಟು ರಾಜ್ಯಕ್ಕೆ ಭೇಟಿ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಲಿ. ಅಂದೇ ದುಡಿದು ಅಂದೇ ತಿನ್ನುವ ಬಡಜನರಿಗೆ ಲಾಕ್‍ಡೌನ್‍ನಿಂದ ತುಂಬಾ ಅನ್ಯಾಯವಾಗಿದೆ. ಮೋದಿ ಮತ್ತು ಬಿಎಸ್‍ವೈ ಸರ್ಕಾರ ಬಡಜನರಿಗೆ ಆರ್ಥಿಕ ಸಹಾಯ ನೀಡಲಿ ಎಂದರು.
ಸಂಸದರು ಡಿಸಿ ಹಿಂದೆ ಸುತ್ತುವುದು ಬಿಡಲಿ
ಸಂಸದರು ಜಿಲ್ಲಾಧಿಕಾರಿಗಳ ಹಿಂದೆ ಸುತ್ತುವುದನ್ನು ಬಿಡಬೇಕು. ಸ್ಥಳೀಯವಾಗಿ ಅಲ್ಲಿ ಇಲ್ಲಿ ಸುತ್ತುವುದನ್ನು ಬಿಟ್ಟು ದೆಹಲಿಗೆ ತೆರಳಿ ಆಕ್ಸಿಜನ್, ವ್ಯಾಕ್ಸಿನ್ ಸಮರ್ಪಕವಾಗಿ ಸಿಗುವಂತೆ ಮಾಡಬೇಕು. ಪ್ರಧಾನಿ ಮೋದಿ, ಗೃಹಸಚಿವರು, ಕೇಂದ್ರ ಮಂತ್ರಿಗಳನ್ನು ಸಂಪರ್ಕಿಸಿ ದಾವಣಗೆರೆ ನಗರ ಹಾಗೂ ಜಿಲ್ಲೆಗೆ ಬೇಕಾದ ವ್ಯವಸ್ಥೆ ಮಾಡಬೇಕು.
– ಡಿ. ಬಸವರಾಜ್, ಕೆಪಿಸಿಸಿ ವಕ್ತಾರ
ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, 2020ರಲ್ಲಿ ಲಾಕ್‍ಡೌನ್ ಘೋಷಣೆ ಆದ ನಂತರ ಕೇಂದ್ರ ಸರ್ಕಾರವು ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ನೀಡುವ ನೆಪದಲ್ಲಿ ಅವರ ಒಟ್ಟು ಸಾಲದ ಶೇ.20ರಷ್ಟು ಕೋವಿಡ್ ಸಾಲವನ್ನು ಬಡ್ಡಿ ರಹಿತವೆಂದು ನೀಡಿ ಇದಕ್ಕೆ 4 ವರ್ಷಗಳ ಮರುಪಾವತಿ ಅವಧಿ ನೀಡಿತ್ತು. ಇದಕ್ಕೂ ಸಹ ಬಡ್ಡಿಯನ್ನು ಹಾಕಲಾಗಿತ್ತು. ಈ ಬಡ್ಡಿಗಾಗಿ ಕೊಟ್ಟ ಸಾಲವನ್ನು ಐದು ತಿಂಗಳ ಅವಧಿಯಲ್ಲಿ ಕಡ್ಡಾಯವಾಗಿ ಕಟ್ಟಬೇಕೆಂದು ಹೇಳಿ ಕಟ್ಟಿಸಿಕೊಂಡರು. ಈಗ ಪುನಃ ಲಾಕ್‍ಡೌನ್ ಘೋಷಣೆ ಆಗಿದೆ. ಇದರಿಂ ದಾಗಿ ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವವರಿಗೆ ಬಹಳ ಆರ್ಥಿಕ ತೊಂದರೆ ಆಗಿದೆ. ಹಾಗಾಗಿ ಈ 2 ಸಾಲಗಳಿಗೆ ಅಂದರೆ ಮೂಲ ಸಾಲಕ್ಕೆ ಬಡ್ಡಿ ಮತ್ತು ಕೋವಿಡ್ ಸಾಲದ ಕಂತುಗಳನ್ನು ತೀರಿಸಲು ಬಹಳ ಕಷ್ಟಕರವಾಗಿದೆ. ಕೂಡಲೇ ಬಡ್ಡಿ ರಹಿತ ಸಾಲವನ್ನು ನೀಡಿ ಈ ಸಂಕಷ್ಟದಿಂದ ಪಾರು ಮಾಡಬೇಕಾಗಿದೆ ಎಂದರು.
ಪಾಲಿಕೆ ಸದಸ್ಯ ಮಂಜುನಾಥ್ ಗಡಿಗು ಡಾಳ್ ಮಾತನಾಡಿ, ನಗರದ ಹಲವೆಡೆ ಜನರು ನಿಯಮ ಮೀರಿ ಸಂಚಾರ ಮಾಡುತ್ತಿದ್ದಾರೆ. ಆದ್ದ ರಿಂದ ಎಲ್ಲಾ ಹೋಟೆಲ್‌ಗಳಲ್ಲಿ ಪಾರ್ಸೆಲ್ ಅವಧಿ ಸೀಮಿತ ಮಾಡಬೇಕು. ಪ್ರತಿ ವಾರ್ಡ್‍ನ ಲ್ಲಿ ಒಬ್ಬರು ಪೊಲೀಸ್ ಬೀಟ್ ಒದಗಿಸಬೇಕು. ಆನ್‍ಲೈನ್ ಆಹಾರ ವಿತರಣೆ ಮಾಡುವ ಉದ್ಯೋ ಗಿಗಳಿಗೆ ಸಮಯ ನಿಗದಿ ಮಾಡಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಗಣೇಶ್ ಹುಲ್ಲುಮನಿ, ಹೆಚ್. ಸುಭಾನ್‍ಸಾಬ್, ಕೆ.ಎಂ. ಮಂಜುನಾಥ್, ಡಿ. ಶಿವಕುಮಾರ್ ಹಾಗೂ ಇತರರು ಇದ್ದರು.