ದಾವಣಗೆರೆ, ಮಾ. 12- ಆಗ್ರೋ ಇಂಡಿಯಾ ಸಂಸ್ಥೆ ವತಿಯಿಂದ ಮೇ 21 ರಿಂದ ಮೂರು ದಿನಗಳ ಕಾಲ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ `ಕೃಷಿ ಎಕ್ಸ್ಪೋ-2021′ ಕೃಷಿ ಮೇಳ ಹಮ್ಮಿಕೊಂಡಿರುವುದಾಗಿ ಮುಖ್ಯ ಆಯೋಜಕ ವಿ.ಆರ್. ರವಿಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತಿ ದೊಡ್ಡ ಕೃಷಿ ವಸ್ತು ಪ್ರದರ್ಶನ ಇದಾಗಿದ್ದು, ಕೃಷಿಗೆ ಸಂಬಂಧಪಟ್ಟ 200ಕ್ಕೂ ಹೆಚ್ಚು ಕಂಪನಿಗಳು, ಕೃಷಿ, ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಅಭಿವೃದ್ಧಿ ಸಂಸ್ಥೆಗಳೂ ಸಹ ಮೇಳದಲ್ಲಿ ಭಾಗವಹಿಸಿ, ರೈತರಿಗೆ ಮಾಹಿತಿ ನೀಡಲಿವೆ ಎಂದು ಹೇಳಿದರು.
ಸಮಗ್ರ ಬೆಳೆ, ಪೋಷಕಾಂಶ ಹಾಗೂ ಪೀಡನೆ ನಿರ್ವಹಣೆ, ಸಾವಯವ ಕೃಷಿ, ಜೈವಿಕ ಗೊಬ್ಬರ, ಮಳೆ ನೀರು ಕೊಯ್ಲು, ಅಂತರ್ಜಲ ಮರುಪೂರ್ಣ, ರೈತರ ಆವಿಷ್ಕಾರಗಳು, ಕೃಷಿ ತಂತ್ರಜ್ಞರೊಂದಿಗೆ ಸಂವಾದ, ಹೈಟೆಕ್ ತೋಟಗಾರಿಕೆ, ಮಣ್ಣು ರಹಿತ ಬೇಸಾಯ, ದ್ವಿದಳ ಧಾನ್ಯಗಳ ಉತ್ಪಾದನೆ, ಮಹಿಳೆಯರ ಸಬಲೀಕರಣಕ್ಕೆ ಗೃಹ ವಿಜ್ಞಾನ ತಾಂತ್ರಿಕತೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಸಿಗಲಿದೆ ಎಂದರು.
ಮೇಳದಲ್ಲಿ ಮಳಿಗೆಗಳನ್ನು ಕಾಯ್ದಿರಿಸಲು ಮೊ.7204703294, 9035123092ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಾ.ಮಂಜುನಾಥ್, ಪ್ರೊ.ಚಂದ್ರಪ್ಪ, ಡಾ.ಪ್ರಕಾಶ್, ಹಾಲೇಶ ನಾಯ್ಕ ಉಪಸ್ಥಿತರಿದ್ದರು