ಮಲೇಬೆನ್ನೂರು, ಮೇ 16- ಮಹಾಮಾರಿ ಕೊರೊನಾ 2ನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಜನರು ಶೀತ, ಜ್ವರ, ಮೈ-ಕೈ ನೋವಿನಿಂದ ಬಳಲುತ್ತಿದ್ದಾರೆ.
ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುವ ಜ್ವರ ಪೀಡಿತರು ತಕ್ಷಣ ಸ್ಥಳೀಯ ವೈದ್ಯರಿಗೆ ತೋರಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಸ್ವಲ್ಪ ಜನ ಗುಣಮುಖ ರಾದರೆ, ಸ್ವಲ್ಪ ಜನ ಪರಿಸ್ಥಿತಿ ಕೈ ಮೀರಿದ ನಂತರ ಆಕ್ಸಿಜನ್ ಬೆಡ್‌ಗಾಗಿ ಆಸ್ಪತ್ರೆಗಳನ್ನು ಅಲೆದಾಡುವ ಪರಿಸ್ಥಿತಿ ದಿನೇ ದಿನೇ ಹೆಚ್ಚಾಗುತ್ತಿದೆ. ಹರಿಹರ ತಾಲ್ಲೂಕಿನಲ್ಲಿ ಇದುವರಿಗೆ 4100 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಭಾನುವಾರ ವರದಿ ಪ್ರಕಾರ 405 ಸಕ್ರಿಯ ಕೇಸ್‌ಗಳಿವೆ.
ಕೊರೊನಾ ಸೋಂಕಿನಿಂದ ಮತ್ತು ಉಸಿರಾಟದ ತೊಂದರೆ ಯಿಂದಾಗಿ ತಾಲ್ಲೂಕಿನಲ್ಲಿ ಇದುವರೆಗೆ 50ಕ್ಕೂ ಹೆಚ್ಚು ಜನರು ಆಸ್ಪತ್ರೆ ಮತ್ತು ಮನೆಗಳಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಆದರೆ, ಸಾವಿನ ಬಗ್ಗೆ ಯಾರೂ ಅಧಿಕೃತ ಮಾಹಿತಿ ನೀಡುತ್ತಿಲ್ಲ.
ಶನಿವಾರ 34 ಮತ್ತು ಭಾನುವಾರ ಬೆಳಿಗ್ಗೆ ವರದಿ ಪ್ರಕಾರ 41 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಭಾನುವಾರ ಸಂಜೆ ವರದಿ ಪ್ರಕಾರ 140 ಜನರಿಗೆ ಪಾಸಿಟಿವ್ ಎಂಬ ವರದಿ ಜಿಲ್ಲಾಡಳಿತದ ಬುಲೆಟಿನ್‌ನಲ್ಲಿದೆ.
ಕಾರಣಗಳು : ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿರುವುದಕ್ಕೆ ಕಂಡು ಬಂದ ಕಾರಣಗಳೆಂದರೆ ಕಳೆದ ವರ್ಷದಂತೆ ಈ ವರ್ಷ ಗ್ರಾಮಗಳಲ್ಲಿ ಸೋಂಕಿತ ವ್ಯಕ್ತಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಟೆಸ್ಟ್ ಗಳು ಆಗುತ್ತಿಲ್ಲ. ಒಂದು ವೇಳೆ ಆದರೂ ವರದಿ ಬೇಗ ಬರುತ್ತಿಲ್ಲ.
ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದವರು ಹೊರಗಡೆ ಸುತ್ತಾಡುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕುವವರಿಲ್ಲ. ಜ್ವರ ಇತ್ಯಾದಿ ಕಾಯಿಲೆ ಬಂದಿರುವ ವ್ಯಕ್ತಿಯನ್ನು ಪತ್ತೆ ಮಾಡಿ, ಕೋವಿಡ್ ಟೆಸ್ಟ್‌ಗೆ ಒಳಪಡಿಸುತ್ತಿಲ್ಲ. ಹಳ್ಳಿಗಳಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗಿಲ್ಲ ಎಂಬುದು ಮನೆಯಲ್ಲಿರುವವರ ಆರೋಪವಾಗಿದೆ.
ಯಲವಟ್ಟಿಯಲ್ಲಿ ಸಹೋದರರ ಸಾವು : ಯಲವಟ್ಟಿ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಉಸಿ ರಾಟದ ತೊಂದರೆಯಿಂದ ಮಾಲತೇಶಚಾರಿ (34) ಎಂಬಾತ ಮೃತಪಟ್ಟಿದ್ದನು. ನಂತರ ಅವರ ಕುಟುಂಬದವರನ್ನು ಕೋವಿಡ್ ಟೆಸ್ಟ್ ಮಾಡಿಸಿ ದಾಗ ಮೃತರ ಅಣ್ಣ ಜ್ಞಾನೇಶ್‌ಚಾರ್ (37) ಗೂ ಕೊರೊನಾ ಪಾಸಿಟಿವ್ ಬಂದಿತ್ತು. ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿ ತ್ತಾದರೂ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಘಟನೆಯಿಂದಾಗಿ ಯಲವಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಭಯಭೀತರಾಗಿದ್ದಾರೆ. ಆರಾಮಾಗಿ ಇದ್ದ ವ್ಯಕ್ತಿಗಳು ಸಹ ಉಸಿರಾಟ ಸೇರಿದಂತೆ ಇನ್ನಿತರೆ ಕಾರಣಗಳಿಂದ ಸಾಯುತ್ತಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.