ಮೇ 30 ರವರೆಗೆ ನೀರು ಹರಿಸುವಂತೆ ಕೊನೆ ಭಾಗದ ರೈತರ ಒತ್ತಾಯ
ಮಲೇಬೆನ್ನೂರು, ಮೇ 9- ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಹರಿಸುತ್ತಿರುವ ನೀರನ್ನು ಮೇ 20 ರವರೆಗೆ ಮುಂದುವರೆಸುವುದಾಗಿ ಭದ್ರಾ ಕಾಡಾದಿಂದ ಅಧಿಸೂಚನೆ ಹೊರಡಿಸಲಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಬೆಳೆಗಳಿಗೆ ಜನವರಿ 13 ರಿಂದ ಸತತವಾಗಿ 120 ದಿನಗಳ ಕಾಲ ನೀರು ಹರಿಸಲು ತೀರ್ಮಾನಿಸಲಾಗಿತ್ತು.
ಈ ಪ್ರಕಾರ ಮೇ 12 ರಂದು ನಾಲೆಗಳಲ್ಲಿ ನೀರು ನಿಲುಗಡೆ ಮಾಡಬೇಕಾಗಿತ್ತು. ಆದರೆ, ಭದ್ರಾ ಕಾರ್ಯಪಾಲಕ ಇಂಜಿನಿಯರ್‌ಗಳು ಅಚ್ಚುಕಟ್ಟಿನ ಕೊನೆ ಭಾಗದ ಬೆಳೆಗಳಿಗೆ ಇನ್ನೊಂದು ವಾರ ನೀರು ಬೇಕಾಗುತ್ತದೆ ಎಂಬ ವರದಿ ನೀಡಿದ ಹಿನ್ನೆಲೆಯಲ್ಲಿ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಮೇ 20 ರವರೆಗೆ ನಾಲೆಯಲ್ಲಿ ನೀರು ಮುಂದುವರೆಸುವಂತೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಎಂ. ಚಂದ್ರಹಾಸ್ ತಿಳಿಸಿದ್ದಾರೆ.
30 ರವರೆಗೆ ನೀರು ಹರಿಸಿ : ಮೇ 20 ರವರೆಗೆ ಮಾತ್ರ ನೀರು ಮುಂದು ವರೆಸಿದರೆ ಅಚ್ಚುಕಟ್ಟಿನ ಕೊನೆ ಭಾಗದ ಭತ್ತದ ಬೆಳೆಗೆ ತೊಂದರೆ ಆಗಲಿದೆ. ಆದ್ದರಿಂದ ಮೇ 30 ರವರೆಗೆ ನೀರು ಹರಿಸುವಂತೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಭದ್ರಾ ಕಾಡಾ ಅಧ್ಯಕ್ಷರನ್ನು ಕೊನೆ ಭಾಗದ ರೈತರು ಒತ್ತಾಯಿಸಿದ್ದಾರೆ.