ದಾವಣಗೆರೆ, ಮಾ.10- ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಮಹಾನಗರ ಪಾಲಿಕೆಯ 20 ಮತ್ತು 22ನೇ ವಾರ್ಡ್‍ಗಳಲ್ಲಿ ಚುನಾಯಿತ ಸದಸ್ಯರುಗಳ ರಾಜೀನಾಮೆಯಿಂದ ತೆರವಾಗಿರುವ ಸದಸ್ಯರ ಸ್ಥಾನಗಳನ್ನು ತುಂಬಲು ಉಪಚುನಾವಣೆ ನಡೆಸಲಾಗುತ್ತಿದ್ದು, ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ನಗರದ 20ನೇ ವಾರ್ಡ್‍ನ ಭಾರತ್ ಕಾಲೋನಿಯಲ್ಲಿ ಪರಿಶಿಷ್ಟ ಪಂಗಡ (ಮಹಿಳೆ) ಹಾಗೂ 22ನೇ ವಾರ್ಡ್‍ನ ಯಲ್ಲಮ್ಮ ನಗರದಲ್ಲಿ ಸಾಮಾನ್ಯ ಮೀಸಲಾತಿ ನೀಡಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಈ ಕೆಳಗಿನಂತೆ ನಿಗದಿಪಡಿಸಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ಮಾ.17 ರ ಬುಧವಾರ ಕೊನೆಯ ದಿನಾಂಕ. ಮಾ.18 ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ. ಮಾ.20 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ. ಮತದಾನ ಅವಶ್ಯವಿದ್ದರೆ, ಮತದಾನವನ್ನು ಮಾ.29 ರ ಸೋಮವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸುವ ದಿನವಾಗಿದೆ. ಮಾ.31 ಮತ ಎಣಿಕೆ ಮತ್ತು ಚುನಾವಣಾ ಮುಕ್ತಾಯ ದಿನಾಂಕವಾಗಿದೆ.
ಚುನಾವಣಾಧಿಕಾರಿಗಳ ವಿವರ : ವಾರ್ಡ್ ನಂ.20 ಕ್ಕೆ ಚುನಾವಣಾಧಿಕಾರಿಯಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮಣ್ಣನವರ್ (ಮೊ.ಸಂ: 9448999219) ಹಾಗೂ ಸಹಾಯಕ ಚುನಾವಣಾ ಧಿಕಾರಿಯಾಗಿ ಬೀಜ ಪರೀಕ್ಷಾ ಪ್ರಯೋಗಾಲಯ ಸಹಾ ಯಕ ಕೃಷಿ ನಿರ್ದೇಶಕ ರಮೇಶ್ ನಾಯ್ಕ್. ವಿ (82779 31264) ಅವರುಗಳನ್ನು ನೇಮಿಸಲಾಗಿದ್ದು, ಅವರ ಕಚೇ ರಿಯು ಮಹಾನಗರಪಾಲಿಕೆ ಕೊಠಡಿ ಸಂಖ್ಯೆ 2 ರಲ್ಲಿರುತ್ತದೆ.
ವಾರ್ಡ್ ನಂ.22 ಕ್ಕೆ ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿಗಳಾದ ಮಮತ ಹೊಸಗೌಡರ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಗ್ರೇಡ್-2 ಗಿರೀಶ್ ಬಾಬು ಅವರನ್ನು ನೇಮಿಸಲಾಗಿದ್ದು, ಪಾಲಿಕೆಯ ಕೊಠಡಿ ಸಂಖ್ಯೆ 3 ರಲ್ಲಿ ಇವರ ಕಚೇರಿ ಇರುತ್ತದೆ.
ಸದಾಚಾರ ಸಂಹಿತೆ ಅನುಷ್ಠಾನ ತಂಡದ ವಿವರ : ಮಹಾನಗರ ಪಾಲಿಕೆ 20 ಮತ್ತು 22ನೇ ವಾರ್ಡ್ ವ್ಯಾಪ್ತಿಯ ಸದಾಚಾರ ಸಂಹಿತೆಯ ನೋಡಲ್ ಅಧಿಕಾರಿಯಾಗಿ ಪಾಲಿಕೆ ಆಯುಕ್ತರು ಹಾಗೂ ಸದಾಚಾರ ಸಹಾಯಕ ನೋಡಲ್ ಅಧಿಕಾರಿಯಾಗಿ ಸಂಬಂಧಿಸಿದ ವಾರ್ಡ್‍ನ ಕಂದಾಯ ಅಧಿಕಾರಿಗಳು ಮತ್ತು ಸದಾಚಾರ ಸಂಹಿತೆಯ ಅನುಷ್ಠಾನಾಧಿಕಾರಿಯಾಗಿ ಸಂಬಂಧಿಸಿದ ವಾರ್ಡ್‍ನ ಬಿಲ್ ಕಲೆಕ್ಟರ್‌ಗಳನ್ನು ನೇಮಿಸಲಾಗಿದೆ.
ಮತಗಟ್ಟೆ ಮತ್ತು ಮತದಾರರ ವಿವರ : ವಾರ್ಡ್ ಸಂಖ್ಯೆ 20 ಮತ್ತು 22 ಸೇರಿ ಒಟ್ಟು 15 ಮತಗಟ್ಟೆಗಳಿದ್ದು, 7638 ಪುರುಷರು ಹಾಗೂ 7443 ಮಹಿಳೆಯರು ಸೇರಿದಂತೆ ಒಟ್ಟು 15081 ಮತದಾರರಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳ ವಿವರ : ಮತದಾನದ ಉದ್ದೇಶಕ್ಕಾಗಿ 15 ಬಿ.ಯು, 15 ಸಿ.ಯು, ತರಬೇತಿಯ ಉದ್ದೇಶಕ್ಕಾಗಿ 4 ಬಿ.ಯು ಮತ್ತು 4 ಸಿ.ಯು ಗಳನ್ನು ಬಳಸಿಕೊಳ್ಳಲಾಗಿದ್ದು ಹಾಗೂ 6 ಬಿ.ಯು ಮತ್ತು 6 ಸಿ.ಯುಗಳನ್ನು ಕಾಯ್ದಿರಿಸಲಾಗಿದೆ. ಒಟ್ಟಾರೆಯಾಗಿ 25 ಬಿ.ಯು., 25 ಸಿ.ಯುಗಳನ್ನು ಚುನಾವಣೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಸೆಂಟರ್ ಮತ್ತು ಮತ ಎಣಿಕೆ ಕೇಂದ್ರ ವಿವರ : ಪಿ.ಬಿ. ರಸ್ತೆಯಲ್ಲಿರುವ ಡಿ.ಆರ್.ಆರ್. ವಿದ್ಯಾಸಂಸ್ಥೆಯನ್ನು ಮಸ್ಟರಿಂಗ್, ಡಿ-ಮಸ್ಟರಿಂಗ್ ಹಾಗೂ ಎಣಿಕಾ ಕೇಂದ್ರವಾಗಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.