ಹರಪನಹಳ್ಳಿಯಲ್ಲಿ ಎಸ್ಪಿ ಸೈದುಲ್ಲಾ ಅಡಾವತ್
ಹರಪನಹಳ್ಳಿ, ಜು.24- ಆರ್ಟಿಐ ಕಾರ್ಯಕರ್ತ ಟಿ. ಶ್ರೀಧರ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ 9 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ತನಿಖೆ ಕೈಗೊಂಡಿ ದ್ದೇವೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಸ್ಪಷ್ಟನೆ ನೀಡಿದರು.
ಶ್ರೀಧರ್ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪಟ್ಟಣದ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶ್ರೀಧರ್ ಹತ್ಯೆಯಾದ ದಿನವೇ ಇನ್ನೋರ್ವ ಆರ್ಟಿಐ ಕಾರ್ಯಕರ್ತನ ಹತ್ಯೆ ನಡೆದಿದೆ. ಹಾಗಾಗಿ ಬೆಂಗಳೂರಿನಲ್ಲಿ ಈ ಪ್ರಕರಣಗಳನ್ನು ಮಾನಿಟರಿಂಗ್ ಮಾಡಲಾಗುತ್ತಿದೆ ಎಂದರು. ಹತ್ಯೆ ಹಿಂದಿನ ನಿಖರ ಉದ್ದೇಶ ತಿಳಿಯಲು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪ್ರತಿದಿನವೂ ತೀವ್ರ ವಿಚಾರಣೆ ಕೈಗೊಂಡಿದ್ದೇವೆ ಎಂದರು.
ಹರಪನಹಳ್ಳಿ ಪೊಲೀಸ್ ಠಾಣೆಯು ಮೇಲ್ದರ್ಜೆಗೆ ಏರಿದ್ದು ಶೀಘ್ರದಲ್ಲೇ ಪ್ರಕ್ರಿಯೆ ನಡೆಯಲಿದೆ. ಅದರಂತೆ ಅಧಿಕಾರಿ, ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಹರಪನಹಳ್ಳಿಗೆ ನೂತನ ಪೊಲೀಸ್ಠಾಣೆ ಮಂಜೂರಾಗಿದ್ದು, ಠಾಣೆಯು ಪೊಲೀಸ್ ಅತಿಥಿ ಗೃಹದ ಆವರಣದಲ್ಲಿ ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ ಎಂದರು.
ಈ ವೇಳೆ ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ನಾಗರಾಜ್ ಎಂ. ಕಮ್ಮಾರ್, ಪಿಎಸ್ಐ ಸಿ. ಪ್ರಕಾಶ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.