ದಾವಣಗೆರೆ, ಮಾ. 9- ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್˝ನಲ್ಲಿ ನಗರ ಪ್ರದೇಶಗಳಲ್ಲಿರುವ ಸ್ಲಂ ಜನರಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಿಲ್ಲ ಎಂದು ಸ್ಲಂ ಜನಾಂದೋಲನ ಕರ್ನಾಟಕ ಖಂಡಿಸಿದೆ.
ಬಜೆಟ್˝ನಲ್ಲಿ ವಸತಿ ಇಲಾಖೆಗೆ ನೀಡಿರುವ ಹಣದ ಮೊತ್ತ 2,990 ಕೋಟಿ ರೂ.ಗಳಾಗಿದ್ದು ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಎಷ್ಟು ಹಣವನ್ನು ಒದಗಿಸಲಾಗಿದೆ ಎಂಬ ಸ್ಪಷ್ಟತೆ ಇಲ್ಲ.
ವಲಯ 2ರ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಆದ್ಯತೆಯಲ್ಲಿ ನಗರ ಪ್ರದೇಶದ ಜನಸಂಖ್ಯೆಯ ಶೇ.40 ಜನರಿರುವ ಸ್ಲಂ ನಿವಾಸಿಗಳ ಕ್ಷೇಮಾಭಿವೃದ್ಧಿಗೆ ಹಣ ನೀಡದೆ ವಂಚಿಸಿರುವುದು, ವಂಚಿತ ಸಮುದಾಯಗಳನ್ನು ಮತ್ತಷ್ಟು ಕತ್ತಲೆಗೆ ತಳ್ಳಲಾಗಿದೆ.
ವಲಯ 3ರಲ್ಲಿ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ಅಂಶದಲ್ಲಿ ಕೊಳಚೆ ಪ್ರದೇಶ ನಿವಾಸಿಗಳಿಗೆ ವಸತಿ ಮತ್ತು ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಹಣ ಮೀಸಲಿರಿಸದೆ, ರಾಜ್ಯದಲ್ಲಿ ಬಲಾಢ್ಯ ಸಮುದಾಯಗಳ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡಿ ಅಳಿವಿನಂಚಿನಲ್ಲಿರುವ ಸಣ್ಣಪುಟ್ಟ ಅಸ್ಪೃಶ್ಯ ಸಮುದಾಯಗಳನ್ನು ಹಾಗೂ ಅಲೆಮಾರಿ, ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗುತ್ತಿದೆ.
ಕೊಳಚೆ ಪ್ರದೇಶಗಳ ಭೂ ಸ್ವಾಧೀನಕ್ಕೆ 1000 ಕೋಟಿ ರೂ. ಹಣ ಮೀಸಲಿಡಲು ಒತ್ತಾಯಿಸಿ, ಸ್ಲಂ ನಿವಾಸಿಗಳಿಗೆ ನಿರ್ಮಿಸುವ ಮನೆಗಳ ಘಟಕ ವೆಚ್ಚವನ್ನು 5ಲಕ್ಷಕ್ಕೆ ಹೆಚ್ಚಿಸಲು, ನಗರ ಪ್ರದೇಶದ ಬಡ ನಿವೇಶ/ವಸತಿ ರಹಿತರಿಗೆ ವಸತಿ ಕಲ್ಪಿಸಲು ಲ್ಯಾಂಡ್ ಬ್ಯಾಂಕ್ ಜಾರಿಗೊಳಿಸಲು ಸ್ಲಂ ಜನಾಂದೋಲನ ಒತ್ತಾಯಿಸಿತ್ತು. ಆದರೆ ಈ ಅಂಶಗಳನ್ನು ಪರಿಗಣಿಸದಿರುವುದು ಬಿಜೆಪಿ ಸರ್ಕಾರದ ಬಡ ಜನ ವಿರೋಧಿ ನೀತಿಯನ್ನು ಬಹಿರಂಗಗೊಳಿಸುತ್ತದೆ ಎಂದು ಸಂಘಟನೆ ತನ್ನ ಹೇಳಿಕೆಯಲ್ಲಿ ಟೀಕಿಸಿದೆ.