ದಾವಣಗೆರೆ, ಮೇ 7- ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಕೂಡ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದ ಕಾರಣ ತುರ್ತಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 4.34 ಲಕ್ಷ ಲಸಿಕೆ ಗುರಿ ಇದೆ. ಆದರೆ, 2.10 ಲಕ್ಷ ಲಸಿಕೆ ಮಾತ್ರ ಸರಬರಾಜಾಗಿದೆ. ಲಸಿಕೆ ಪಡೆಯಲು ಪರದಾಟ ಆರಂಭವಾಗಲಿದೆ. ಕೋವ್ಯಾಕ್ಸಿನ್ ಲಸಿಕೆ ಸರಬರಾಜಿಗೆ 2ನೇ ಡೋಸ್ ಪಡೆಯುವವರಿಗೆ ಅನಾನುಕೂಲವಾಗಿದೆ. ಕೂಡಲೇ ಇದನ್ನು ಸರಿ ಪಡಿಸುವಂತೆ ಕೋರಿದ್ದಾರೆ.
ರೆಮ್ಡಿಸಿವಿರ್ ಇಂಜೆಕ್ಷನ್ ಅವಶ್ಯಕತೆ ಇದೆ. ಆಕ್ಸಿಜನ್ ಮತ್ತು ವೆಂಟಿಲೇಟರ್ ಬೆಡ್ಗಳ ಕೊರತೆಯಿಂದ ಸಾವು – ನೋವು ಹೆಚ್ಚಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ಗಳು ಖಾಲಿ ಇರುವುದಿಲ್ಲ. ಹೆಚ್ಚಿನ ಹಾಸಿಗೆಗಳ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವಶ್ಯಕತೆಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳುಳ್ಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಬೇಕಾಗಿದೆ. ನಾನ್ ಕೊರೊನಾ ರೋಗಿಗಳಿಗೆ ತುರ್ತಾಗಿ ಅವಶ್ಯಕ ವೈದ್ಯಕೀಯ ಚಿಕಿತ್ಸೆಗೆ ಕ್ರಮ ವಹಿಸಬೇಕೆಂದು ಕೋರಿದ್ದಾರೆ.