ಅಚ್ಚುಕಟ್ಟು ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ ಕಾಡಾ ಅಧ್ಯಕ್ಷರು

ಅಚ್ಚುಕಟ್ಟು ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿದ ಕಾಡಾ ಅಧ್ಯಕ್ಷರು - Janathavaniದಾವಣಗೆರೆ, ಮೇ 7- ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ದೇಶದಲ್ಲಿ ಕಷ್ಟದಲ್ಲಿ ಇರುವ ಏಕೈಕ ವರ್ಗವಿದ್ದರೆ ಅದು ರೈತಾಪಿ ವರ್ಗ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ದೊಡ್ಡಗೊಪ್ಪೇನಹಳ್ಳಿ, ಹೊನ್ನೆಕಟ್ಟೆ, ಹೊಸೂರು, ಮಲ್ಲಿಗೇಹಳ್ಳಿ ಹಾಗೂ ಕಾರೇಹಳ್ಳಿ ಗ್ರಾಮದ ಅಚ್ಚುಕಟ್ಟು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಭದ್ರಾ ಕಾಡಾ ಅಧ್ಯಕ್ಷರಾದ ನಂತರ ಅಚ್ಚುಕಟ್ಟು ಭಾಗದಲ್ಲಿ ಪ್ರವಾಸ ಕೈಗೊಂಡು ರೈತರ ಸಮಸ್ಯೆಗಳನ್ನು ಆಲಿಸಿ, ಸ್ಥಳಗಳ ಪರಿಶೀಲನೆ ನಡೆಸಿದಾಗ ಬಹಳಷ್ಟು ರಸ್ತೆಗಳು ಹಾಳಾಗಿರುವುದು ಗಮನಕ್ಕೆ ಬಂತು. ನಾನು ಭೇಟಿ ನೀಡಿದ ಪ್ರತಿಯೊಂದು ಗ್ರಾಮಕ್ಕೆ ಅನುದಾನ ಬಂದ ನಂತರ ಒಂದೊಂದು ಕೆಲಸ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ ಎಂದರು. 

ಅನ್ನದಾತರಿಗೆ ಪ್ರಮುಖವಾಗಿ ತಾವು ಬೆಳೆದ ಬೆಳೆಗಳು, ವಸ್ತುಗಳನ್ನು ಸಾಗಿಸಲು ಹಾಗೂ ಕಟಾವು ಮಾಡಿದ ಬೆಳೆಗಳನ್ನು ಕೊಂಡೊಯ್ಯಲು ಟ್ರ್ಯಾಕ್ಟರ್, ಎತ್ತಿನಗಾಡಿ ಇನ್ನಿತರೆ ವಾಹನಗಳ ಮೂಲಕ ಪ್ರತಿದಿನ ರಸ್ತೆಗಳನ್ನು ಬಳಸುತ್ತಾರೆ. ಜೊತೆಗೆ ಕೆಲವು ರೈತರ ಬಳಿ ವಾಹನ ವ್ಯವಸ್ಥೆ ಇಲ್ಲದೇ ಇರುವುದರಿಂದ  ಭತ್ತದ ಕಣಜ, ಕಬ್ಬಿನ ಜಲ್ಲೆ, ಹುಲ್ಲಿನ ಹೊರೆ ಹೊತ್ತುಕೊಂಡು ಸಾಗಲು ಉಬ್ಬು ತಗ್ಗು ಇರುವ ರಸ್ತೆಯನ್ನು ಅವಲಂಬಿಸಬೇಕಾಗಿದ್ದು ತೊಂದರೆಯಾಗಿದೆ.

ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿ ತಕ್ಷಣವೇ ಸರ್ಕಾರಕ್ಕೆ ಅನುದಾನ ಕೋರಿ ಪತ್ರ ಬರೆದಾಗ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಂಸದರು ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ಪರಿಣಾಮ ಆದ್ಯತೆ ಮೇರೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಯಿತು ಎಂದರು.

ರೈತರು ಮಾತನಾಡಿ, ಕಳೆದ 20 ವರ್ಷಗಳಿಂದ ಕೊನೆಯ ಭಾಗಕ್ಕೆ ನೀರು ತಲುಪಿರಲಿಲ್ಲ. ಈಗ ತಲುಪಿದ್ದು ಅನ್ನದಾತರ ಬಾಳಲ್ಲಿ ಹರ್ಷ ಮೂಡಿಸಿದೆ ಎಂದರು.

ಈ ಸಂದರ್ಭದಲ್ಲಿ ಅಭಿಯಂತರರಾದ ಪುನೀತ್ ಮತ್ತು ಕಿರಣ್, ಗಂಗಣ್ಣ, ಶ್ರೀನಿವಾಸ್, ಅಮುದಾ, ಅಚ್ಚುಕಟ್ಟು ಭಾಗದ ರೈತರು, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು, ಗ್ರಾಮದ ರೈತರು ಉಪಸ್ಥಿತರಿದ್ದರು.

error: Content is protected !!