ಆಮ್ಲಜನಕವನ್ನು ಬೇರೆ ಜಿಲ್ಲೆಗಳಿಗೆ ಕಳಿಸದೇ ನಮ್ಮ ಜಿಲ್ಲೆಯ ರೋಗಿಗಳಿಗೆ ಮೀಸಲಿಡಿ

ಆಮ್ಲಜನಕವನ್ನು ಬೇರೆ ಜಿಲ್ಲೆಗಳಿಗೆ ಕಳಿಸದೇ ನಮ್ಮ ಜಿಲ್ಲೆಯ ರೋಗಿಗಳಿಗೆ ಮೀಸಲಿಡಿ - Janathavaniಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್‌ ಮುಖಂಡ ಎಂ.ಟಿ. ಸುಭಾಷ್‌ಚಂದ್ರ ಒತ್ತಾಯ

ದಾವಣಗೆರೆ, ಮೇ 7- ಪ್ರಸ್ತುತ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜನರ ಜೀವನದ ಜೊತೆ ಚೆಲ್ಲಾಟ ಬೇಡ ಎಂದು ಕಾಂಗ್ರೆಸ್‌ ಮುಖಂಡ ಎಂ.ಟಿ. ಸುಭಾಷ್‌ಚಂದ್ರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಕೋವಿಡ್‌ ನಿಯಂತ್ರಣದ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೇವಲ ಪ್ರಚಾರಕ್ಕಾಗಿ ಬೇಡ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕಠಿಣ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸ ಬೇಕಾಗಿದೆ ಎಂದರು.

ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಮ್ಲಜನಕದ ಬೇಡಿಕೆ ಕೂಡಾ ಹೆಚ್ಚಾಗುತ್ತಿದೆ. ಇದೀಗ ಜಿಲ್ಲೆಗೆ 8,500 ಲೀ. ಆಮ್ಲಜನಕದ ಅವಶ್ಯಕತೆ ಇದೆ. ಆಮ್ಲಜನಕವನ್ನು ಬೇರೆ ಜಿಲ್ಲೆಗಳಿಗೆ ಕಳಿಸದೇ ನಮ್ಮ ಜಿಲ್ಲೆಯ ರೋಗಿಗಳಿಗೆ ಮೀಸಲಿಡುವಂತೆ ಮನವಿ ಮಾಡಿದರು.

ಹರಿಹರ ತಾಲ್ಲೂಕಿನಲ್ಲಿ ಇರುವ ಸದರನ್‌ ಗ್ಯಾಸ್‌ ಸಂಸ್ಥೆಯು ಆಮ್ಲಜನಕವನ್ನು ದಾವಣಗೆರೆ ಸಿ.ಜಿ. ಆಸ್ಪತ್ರೆಗೆ 6 ಕೆ.ಎಲ್, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ 4 ಕೆ.ಎಲ್‌ ಸರಬರಾಜು ಮಾಡುತ್ತಿದ್ದು, ಇದರೊಟ್ಟಿಗೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ ತಾಲ್ಲೂಕುಗಳಿಗೂ 8,500 ಲೀಟರ್‌ ಆಕ್ಸಿಜನ್‌ ಸರಬರಾಜು ಮಾಡಲಾಗುತ್ತಿತ್ತು ಎಂದು ಮಾಹಿತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಕಡತಿ ತಿಪ್ಪಣ್ಣ, ಬಿ.ಜಿ. ಚಂದ್ರಶೇಖರ್‌, ಯಲವಟ್ಟಿ ಕೃಷ್ಣಮೂರ್ತಿ, ಟಿ ನಾಗರಾಜ್ ಮತ್ತಿತರರಿದ್ದರು.

error: Content is protected !!