ದಾವಣಗೆರೆ, ಮಾ.6- ಕೋವಿಡ್-19 ಹಿನ್ನೆಲೆ ಯಲ್ಲಿ ಜಿಲ್ಲಾಧಿಕಾರಿಗಳ ಆದೇಶದನ್ವಯ ಈ ಬಾರಿಯ 17ನೇ ವರ್ಷದ ಕುರುವತ್ತಿ ಪಾದಯಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಕುರುವತ್ತಿ ಬಸವೇಶ್ವರ ಪಾದ ಯಾತ್ರೆ ಸೇವಾ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನಪ್ಪ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಬಾರಿ ನಾಲ್ಕು ಸಾವಿರ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಾ. 13 ರಂದು ಕುರುವತ್ತಿ ಶ್ರೀ ಬಸವೇಶ್ವರ ಹಾಗೂ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಜರುಗಲಿದ್ದು, ಮಾ. 11 ರಂದು ನಗರದಿಂದ ಪಾದಯಾತ್ರೆ ಹೊರಡಬೇಕಿತ್ತು. ಆದರೆ ಈ ಬಾರಿ ಪಾದಯಾತ್ರೆ ರದ್ದಾಗಿದೆ ಎಂದರು.
ಕುರುವತ್ತಿಯಲ್ಲಿ ಈ ಬಾರಿ ಭಕ್ತರಿಗೆ ಯಾವುದೇ ವಸತಿಯಾಗಲಿ, ಪ್ರಸಾದದ ವ್ಯವಸ್ಥೆ ಕೂಡ ಇರುವುದಿಲ್ಲ. ನಿಯಮ ಮೀರಿ ಸ್ವಇಚ್ಚೆಯಿಂದ ಪಾದಯಾತ್ರೆ ಹೋದರೆ ಸಮಿತಿ ಜವಾಬ್ದಾರರಾಗುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಕೆ.ಎಂ. ಲೋಕೇಶ್ವರಯ್ಯ, ಶಿವಾನಂದಪ್ಪ ಬೆನ್ನೂರು, ಎನ್. ಸತ್ಯನಾರಾಯಣ, ಹೆಚ್. ಚನ್ನಬಸಪ್ಪ, ಶಿವಕುಮಾರ್, ಕೆ. ಬಸವರಾಜಪ್ಪ ಉಪಸ್ಥಿತರಿದ್ದರು.