ಜನತಾವಾಣಿ ವರದಿ ಫಲಶೃತಿ
ಮಲೇಬೆನ್ನೂರು, ಮಾ.6- ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಗೆ ಹಾಕಲಾಗಿದ್ದ ಘನತ್ಯಾಜ್ಯ ವಸ್ತುಗಳನ್ನು ಶನಿವಾರ ಕಂದಾಯ ಇಲಾಖೆ ಅಧಿಕಾರಿಗಳು ಸ್ವಚ್ಛತೆ ಮಾಡಿಸಿದ್ದಾರೆ.
ಕೆರೆ ಸಮೇತ ಇರುವ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಮದುವೆ ಸಮಾರಂಭದಲ್ಲಿ ಬಳಸಲಾದ ಊಟದ ಟೇಬಲ್ ಮೇಲೆ ಹಾಸುವ ಪೇಪರ್ರೋಲ್ ಮತ್ತು ಕುಡಿಯುವ ನೀರಿನ ಲೋಟ, ನೀರಿನ ಖಾಲಿ ಬಾಟಲ್ ಇತ್ಯಾದಿ ಕಸವನ್ನು ಸಂಜೆ ಕೆರೆಗೆ ಹಾಕಲಾಗಿತ್ತು. ಜೊತೆಗೆ ಬೇರೆಯವರು ಕೂಡಾ ಘನತ್ಯಾಜ್ಯ ವಸ್ತುಗಳನ್ನು ರಾತ್ರಿ ವೇಳೆ ಕೆರೆಗೆ ತಂದು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಜನತಾವಾಣಿಯಲ್ಲಿ ಚಿತ್ರ ಸಹಿತ ವರದಿ ಪ್ರಕಟಗೊಂಡ ತಕ್ಷಣ ಉಪತಹಶೀಲ್ದಾರ್ ಆರ್. ರವಿ, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಭೇಟಿ ನೀಡಿ, ಕೆರೆಗೆ ಹಾಕಿದ ಘನತ್ಯಾಜ್ಯ ವಸ್ತುಗಳನ್ನು ತೆಗೆಸಿ, ಸ್ವಚ್ಛ ಮಾಡಿಸಿದ್ದಾರೆ. ನಂತರ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಶ್ಯಾನುಭೋಗರಾದ ಧರ್ಮ ರಾಜ್ ಅವರೊಂದಿಗೆ ಮಾತನಾಡಿದ ಉಪ ತಹಶೀಲ್ದಾ ರ್ ಅವರು, ಸಮುದಾಯ ಭವನದ ಕಸವನ್ನು ಕೆರೆಗೆ ಹಾಕದಂತೆ ನೋಡಿಕೊಳ್ಳಿ ಮತ್ತು ಬೇರೆಯವರು ಕೆರೆಗೆ ಕಸ ಹಾಕದಂತೆ ನೋಡಿಕೊಳ್ಳಲು ಒಬ್ಬರನ್ನು ಸಂಬಳ ಕೊಟ್ಟು ನೇಮಕ ಮಾಡಿ ಎಂದು ಸೂಚನೆ ನೀಡಿದರು.
ಸಾರ್ವಜನಿಕರೂ ಕೂಡಾ ಕೆರೆ ಕಟ್ಟೆಗಳ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ರೀತಿಯ ವಸ್ತುಗಳನ್ನು ಕೆರೆಗೆ ಹಾಕಬಾರದು. ಇದರಿಂದ ನೀರು ಮಲಿನಗೊಳ್ಳುವುದರ ಜೊತೆಗೆ ನೀರನ್ನು ಬಳಸುವ ಜನರಿಗೆ, ಪಶು-ಪಕ್ಷಿಗಳಿಗೆ ತೊಂದರೆ ಆಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಉಪತಹಶೀಲ್ದಾರ್ ಮನವಿ ಮಾಡಿದ್ದಾರೆ.