ಜಿಗಳಿಯಲ್ಲಿ ಸೋಂಕಿಗೆ ಓರ್ವ ಬಲಿ
ಮಲೇಬೆನ್ನೂರು, ಮೇ 5- ಜಿಗಳಿ ಗ್ರಾಮದ 52 ವರ್ಷದ ವ್ಯಕ್ತಿಯೋರ್ವ ಕೊರೊನಾ ಸೋಂಕಿಗೆ ಬಲಿಯಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಜ್ವರ, ಮೈ-ಕೈ ನೋವು ಇದ್ದ ಕಾರಣ ಸೋಮವಾರ ಕೋವಿಡ್ ಟೆಸ್ಟ್ ಮಾಡಿಸಿದ್ದು, ಟೆಸ್ಟ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಂಗಳ ವಾರ ಸಂಜೆ ಹರಿಹರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಬೆಳಿಗ್ಗೆ ಉಸಿರಾಟದಲ್ಲಿ ತೊಂದರೆ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿ ದ್ದಾರೆ. ನಂತರ ಕೋವಿಡ್ ಮಾರ್ಗಸೂಚಿ ಯಂತೆ ಜಿಗಳಿ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿತು.
ಯುವಕರೇ ಹೆಚ್ಚು ಬಲಿ : ಮೂಲಗಳ ಪ್ರಕಾರ ಕಳೆದ ಒಂದು ವಾರ ದಲ್ಲಿ ಭಾನುವಳ್ಳಿ, ಯಲವಟ್ಟಿ, ಮಲೇಬೆನ್ನೂರು, ಹನಗವಾಡಿ ಗ್ರಾಮಗಳಲ್ಲಿ 50 ವರ್ಷ ಒಳಗಿನ ಯುವಕರು ಉಸಿರಾಟದ ತೊಂದರೆಯಿಂದಾಗಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.
ಒಂದೇ ದಿನ 107 ಕೇಸು : ಮಂಗಳವಾರ ಒಂದೇ ದಿನ ಹರಿಹರ ತಾಲ್ಲೂಕಿನಲ್ಲಿ 107 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇದರಲ್ಲಿ 62 ಜನ ಹರಿಹರ, ಮಲೇಬೆನ್ನೂರಿನವರಾಗಿದ್ದು, 45 ಜನ ಗ್ರಾಮೀಣ ಪ್ರದೇಶದವರಾಗಿದ್ದಾರೆ. 107 ಜನರಲ್ಲಿ 61 ಪುರುಷರು ಮತ್ತು 46 ಮಹಿಳೆಯರು ಇದ್ದಾರೆ. ಬುಧವಾರ ಸಂಜೆ ಹೊತ್ತಿಗೆ ಸೋಂಕಿತರ ಸಂಖ್ಯೆ 25 ದಾಟಿತ್ತು ಎಂದು ತಿಳಿದು ಬಂದಿದೆ.
ಮಲೇಬೆನ್ನೂರಿನಲ್ಲಿ ಮೂವರಿಗೆ ಸೋಂಕು : ಪಟ್ಟಣದಲ್ಲಿ ಕೊರೊನಾ ಸೋಂಕು ಹರಡದಂತೆ ಪುರಸಭೆ ವತಿಯಿಂದ ಬುಧವಾರ ಸ್ಯಾನಿಟೈಜ್ ಮಾಡಲಾಯಿತು. ಮಂಗಳವಾರ ಪಟ್ಟಣದಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಹರಿಹರ ಆಸ್ಪತ್ರೆಗೆ ಕಳುಹಿಸಲಾಗಿದೆ. 81 ಜನರಿಗೆ ಲಸಿಕೆ : ಬುಧವಾರ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 81 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.