ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಹೆಲ್ಪ್‍ಡೆಸ್ಕ್ : ಸಚಿವ ಭೈರತಿ ಬಸವರಾಜ್
ದಾವಣಗೆರೆ, ಮೇ 7 – ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರುವ ಬೆಡ್‍ಗಳು, ವೆಂಟಿಲೇಟರ್, ಐಸಿಯು ಹಾಗೂ ಖಾಲಿ ಇರುವ ಬೆಡ್‍ಗಳ ಸಂಖ್ಯೆ ಸೇರಿದಂತೆ ಎಲ್ಲ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಎಲ್ಲ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗಾಗಿ ಹೆಲ್ಪ್‍ಡೆಸ್ಕ್ ಪ್ರಾರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡುತ್ತಿದ್ದ ಅವರು, ಆಸ್ಪತ್ರೆವಾರು ಬೆಡ್‍ಗಳ ಭರ್ತಿ ಹಾಗೂ ಲಭ್ಯತೆ ಕುರಿತ ವಿವರವುಳ್ಳ ಪ್ರಕಟ ಣೆಯನ್ನು ಜಿಲ್ಲಾಧಿಕಾರಿಗಳು ಪ್ರತಿನಿತ್ಯ ಹೊರಡಿಸಲು ಸೂಚನೆ ನೀಡಲಾಗುವುದು. ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಆಮ್ಲಜನಕ ಹಾಗೂ ರೆಮ್‍ಡಿಸಿವಿರ್ ಔಷಧ ಸಮರ್ಪಕ ಪೂರೈಕೆ ಹಾಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು.
ಸೋಂಕಿತರು ಬೆಡ್ ಕೇಳಲು ಬಂದಾಗ ಅಲ್ಲಿನ ಕಾವಲುಗಾರರೇ ಬೆಡ್ ಇಲ್ಲ ಎಂದು ಆಚೆಗೆ ಅಟ್ಟುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಹೆಲ್ಪ್‌ಡೆಸ್ಕ್ ಸ್ಥಾಪಿಸಬೇಕು. ಕೊರೊನಾ ಚಿಕಿತ್ಸೆ ನೀಡುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಎಸ್.ಐ.ಗಳನ್ನು ನೇಮಿಸಬೇಕು. ಮಾಹಿತಿ ನೀಡಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಸರ್ಕಾರಿ ಹಾಗೂ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳ ಕುರಿತು ಪ್ರತಿನಿತ್ಯ ಬೆಳಿಗ್ಗೆ ಜಿಲ್ಲಾಡಳಿತ ಬುಲೆಟಿನ್ ಪ್ರಕಟಿಸಬೇಕು. ಈ ಬಗ್ಗೆ ಶುಕ್ರವಾರದಿಂದಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶ ಹೊರಡಿಸುವುದಾಗಿ ಸಚಿವರು ಹೇಳಿದರು.
ನಾಳೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿ ಪರಿಶೀಲಿಸಲಾಗುವುದು. ಲೋಪದೋಷಗಳಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭೈರತಿ ಹೇಳಿದರು.