ದಾವಣಗೆರೆ, ಮಾ.5- ರಾಜ್ಯಾದ್ಯಂತ ಮಸೀದಿಗಳ ಮೇಲಿರುವ ಅನಧಿಕೃತ ಮೈಕ್‌ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಏಪ್ರಿಲ್ ಕೊನೆ ವಾರದಲ್ಲಿ ಹೋರಾಟ ನಡೆಸುವು ದಾಗಿ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ರಾಜ್ಯದ ಎಲ್ಲಾ ಮಸೀದಿಗಳ ಮೇಲಿರುವ ಅನಧಿಕೃತ ಮೈಕ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು.
ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಯಾವುದೇ ಮೈಕ್ ಹಾಕಬಾರದೆಂಬ ಸರ್ವೋಚ್ಛ ನ್ಯಾಯಾಲಯದ ಆದೇಶವಿ ದ್ದರೂ, ನಿಯಮ ಪಾಲನೆ ಮಾಡುತ್ತಿಲ್ಲ ಎಂದು ದೂರಿದರು.
ಆರಂಭದಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಗಳ ಮೇಲೆ ಅನಧಿಕೃತ ಮೈಕ್‌ಗಳಿದ್ದರೆ ಅಂತಹ ಕಡೆ ಎಫ್‌ಐಆರ್ ದಾಖಲಿಸಿ ನಂತರ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಪದಾಧಿಕಾರಿಗಳ ನೇಮಕ
ಶ್ರೀರಾಮ ಸೇನಾ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಶಾಖೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಮಣಿ ಸರ್ಕಾರ (ಜಿಲ್ಲಾ ಅಧ್ಯಕ್ಷರು), ಆಲೂರು ರಾಜಶೇಖರ್ (ಜಿಲ್ಲಾ ಉಪಾಧ್ಯಕ್ಷರು), ಸಾಗರ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ರಮೇಶ್ ಕರಾಟೆ (ಜಿಲ್ಲಾ ಹೋರಾಟ ಪ್ರಮುಖ), ವಿನೋದರಾಜ್ ಡಿ.ಬಿ. (ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಮಾಧ್ಯಮ ಪ್ರಮುಖ), ಶ್ರೀಧರ (ಜಿಲ್ಲಾ ಖಜಾಂಚಿ), ಸುನೀಲ್ ವಾಲಿ (ಜಿಲ್ಲಾ ವ್ಯವಸ್ಥಾಪಕ) ಇವರುಗಳನ್ನು ನೇಮಕ ಮಾಡಲಾಗಿದೆ. ಸಭೆಯಲ್ಲಿ ಗಂಗಾಧರ ಕುಲ ಕರ್ಣಿ, ಪರಶುರಾಮ ನಡುಮನಿ ಮತ್ತಿತರರು ಇದ್ದರು.
ರಾಹುಲ್ ಗಾಂಧಿ ಹೇಳಿಕೆ ಖಂಡನೀಯ
ಆರ್.ಎಸ್.ಎಸ್ ಸಂಘಟನೆಯನ್ನು ಪಾಕಿಸ್ತಾನದ ಮದರಸಾಗಳಿಗೆ ಹೋಲಿಕೆ ಮಾಡಿ ನೀಡಿರುವ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಹೇಳಿಕೆ ಅತ್ಯಂತ ಖಂಡನೀಯ ಎಂದು ಗಂಗಾಧರ ಕುಲಕರ್ಣಿ ಹೇಳಿದರು.ಕೇವಲ ಓಲೈಕೆ ರಾಜಕಾರಣ ಮಾಡುವುದನ್ನು ಬಿಟ್ಟು ಜನ ಪರವಾಗಿ ಚಿಂತನೆ ಮಾಡಲಿ. ಹಿಂದೂಪರ ಸಂಘಟನೆಗಳ ವಿರುದ್ಧ ದ್ವೇಷ ಸಾಧಿಸುವುದನ್ನು ಬಿಡಿ ಎಂದು ಹೇಳಿದರು.
ಈ ಕೂಡಲೇ ಹೇಳಿಕೆ ವಾಪಸ್ ಪಡೆಯಬೇಕು. ದೇಶಭಕ್ತರ ಬಗ್ಗೆ ಕನಿಷ್ಟ ಸೌಜನ್ಯವಾದರೂ ಇರಲಿ, ಭಯೋತ್ಪಾದಕರ ಓಲೈಕೆ ಬೇಡ ಎಂದರು.
ಸುಪ್ರೀಂ ಕೋರ್ಟ್ ಅಯೋಧ್ಯೆ ರಾಮಜನ್ಮ ಭೂಮಿ ಬಗ್ಗೆ ಸ್ಪಷ್ಟ ನಿಲುವನ್ನು ಪ್ರಕಟಿಸಿದೆ. ವಕೀಲರೂ, ಮಾಜಿ ಸಿಎಂ ಸಿದ್ದರಾಮಯ್ಯ ರಾಮಮಂದಿರ ನಿರ್ಮಾಣವನ್ನು ವಿರೋಧಿಸಿ ರುವುದು ಸಲ್ಲದು. ಇಂತಹ ಬಾಲಿಶ ಹೇಳಿಕೆ ನಿಲ್ಲಿಸಲಿ ಎಂದು ಕಿಡಿಕಾರಿದರು. ತುಷ್ಟೀಕರಣ ರಾಜಕಾರಣ ಮಾಡಿ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಣಿ ಸರ್ಕಾರ್, ಪರಶುರಾಮ ನಡುಮನಿ, ವಿನೋದರಾಜ್, ಆಲೂರು ರಾಜಶೇಖರ್, ಸಾಗರ್, ಶ್ರೀಧರ್, ರಮೇಶ್ ಕರಾಟೆ, ಸುನೀಲ್ ವಾಲಿ, ಪ್ರಭು ಮತ್ತಿತರರಿದ್ದರು.