ದಾವಣಗೆರೆ, ಮಾ. 3 – ನಾಡಿನ ಹೆಸರಾಂತ ಕೊಟ್ಟೂರಿನ ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ರಥೋತ್ಸವವು ಇದೇ ದಿನಾಂಕ 7ರ ಭಾನುವಾರ ನಡೆಯಲಿ ದ್ದು, ಈ ರಥೋತ್ಸವಕ್ಕೆ ದಾವಣಗೆರೆಯಿಂದ ಹೋಗಬೇಕಿದ್ದ ಪಾದಯಾತ್ರೆಯನ್ನು ರದ್ದುಪಡಿಸಲಾಗಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಪಾದಯಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ಪಾದಯಾತ್ರೆ ಟ್ರಸ್ಟ್ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಕಾರ್ಯದರ್ಶಿ ಟಿ.ಜೆ. ಬಕ್ಕೇಶಪ್ಪ ತಿಳಿಸಿದ್ದಾರೆ.
ಕಾರಣ, ದಾವಣಗೆರೆ-ಕಂಚಿಕೆರೆ ರಸ್ತೆಯ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ನ ಶ್ರೀ ಗುರು ಕೊಟ್ಟೂರೇಶ್ವರ ನಗರದಲ್ಲಿರುವ ಶ್ರೀ ಗುರು ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಇದೇ ದಿನಾಂಕ 7ರ ಭಾನುವಾರ ಬೆಳಿಗ್ಗೆ ಶ್ರೀ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ನಗರದ ಬಸವನಕೋಟೆ ಶ್ರೀಮತಿ ಕೊಟ್ರಮ್ಮ ಮತ್ತು ಕುಟುಂಬದವರು ಸರ್ವ ಭಕ್ತರಿಗೂ ದಾಸೋಹದ ವ್ಯವಸ್ಥೆ ಮಾಡಿದ್ದಾರೆ ಎಂದು ಟ್ರಸ್ಟ್ ಸಹಕಾರ್ಯದರ್ಶಿ ಬಿ. ಚಿದಾನಂದ ಹೇಳಿದ್ದಾರೆ.
ಸರ್ವ ಭಕ್ತಾದಿಗಳು ಶ್ರೀ ಸ್ವಾಮಿಯ ದರ್ಶನ, ಪ್ರಸಾದ ಸ್ವೀಕರಿಸುವಂತೆ ಅವರು ಕೋರಿದ್ದಾರೆ.