ಸಮಾಜದ ಆಸ್ತಿಯಾಗಿ ಬೆಳೆಯಿರಿ

ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ

ದಾವಣಗೆರೆ, ಮಾ.3- ರಾಂಕ್ ಪಡೆಯುವಂತಹ ಕನಸುಗಳನ್ನು ಬಿತ್ತಿ, ಪೋಷಿಸಿ, ಸಾಕ್ಷಾತ್ಕರಿಸಿಕೊಳ್ಳಿ. ಆ ಮೂಲಕ ನಿಮ್ಮ ಕುಟುಂಬದ, ಸಮಾಜದ ಆಸ್ತಿಯಾಗಿ ಬೆಳೆಯಿರಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ 2020-21ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ
ರಾಂಕ್ ವಿಜೇತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ವ್ಯಕ್ತಿತ್ವ ಹೊರ ಹೊಮ್ಮುವುದು ನಮ್ಮ ಆಚಾರ, ವಿಚಾರ, ನಡೆ-ನುಡಿಗಳ ಮೇಲೆ ಅವಲಂಬಿಸಿರುತ್ತದೆಯೇ ಹೊರತು, ಬಾಹ್ಯ ಸೌಂದರ್ಯದಿಂದಲ್ಲ. ಆದ್ದರಿಂದ ಉತ್ತಮ ಗುಣಗಳನ್ನು ಅಭ್ಯಾಸ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ವಿದ್ಯಾರ್ಥಿ ದೆಸೆಯಲ್ಲಿ ತಾವು ಹೊಸ ಜೀನ್ಸ್  ಪ್ಯಾಂಟ್ ಖರೀದಿಸಿ, ಕಷ್ಟ ಪಟ್ಟು ಧರಿಸಿ, ನಂತರ ಅದಕ್ಕೆ ಹೊಂದಿಕೊಂಡದ್ದನ್ನು ಸ್ವಾರಸ್ಯಕರ ವಾಗಿ ವಿವರಿಸಿದ ಜಿಲ್ಲಾಧಿಕಾರಿ, ಕೆಲ ಗುಣಗಳನ್ನು ರೂಢಿಸಿಕೊಳ್ಳುವುದು ಆರಂಭದಲ್ಲಿ ಕಷ್ಟವಾಗಬಹುದು. ಆದರೆ ಪ್ರಯ ತ್ನಿಸಿದರೆ ಖಂಡಿತಾ ಸಾಧ್ಯವಿದೆ ಎಂದರು.

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ಕೊಡಿ. ಕೀಳರಿಮೆಯಿಂದ ಹೊರ ಬನ್ನಿ. ಔಷಧಿಗೆ ಬಳಕೆಯಾಗದ ಸಸ್ಯವಿಲ್ಲ, ಮಂತ್ರಕ್ಕೆ ಬಾರದ ಅಕ್ಷರವಿಲ್ಲ. ಹಾಗೆಯೇ ಯೋಗ್ಯತೆ ಇಲ್ಲದ ವ್ಯಕ್ತಿ ಯಾರೂ ಇಲ್ಲ ಎಂಬುದನ್ನು ಅರಿಯಬೇಕು. ನಿಮ್ಮನ್ನು ನೀವು ಗೌರವಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಸಮಾಜದ ಆಸ್ತಿಯಾಗಿ ಬೆಳೆಯಿರಿ - Janathavaniಔಷಧಿಗೆ ಬಳಕೆಯಾಗದ ಸಸ್ಯವಿಲ್ಲ, ಮಂತ್ರಕ್ಕೆ ಬಾರದ ಅಕ್ಷರವಿಲ್ಲ. ಹಾಗೆಯೇ ಯೋಗ್ಯತೆ ಇಲ್ಲದ ವ್ಯಕ್ತಿ ಯಾರೂ ಇಲ್ಲ ಎಂಬುದು ಅರಿವಿರಲಿ 

– ಮಹಾಂತೇಶ ಬೀಳಗಿ

`ನಹಿ ಜ್ಞಾನೇನ ಸದೃಶ್ಯಂ’ ಶ್ಲೋಕ ಉದಾಹರಿಸುತ್ತಾ, ಜ್ಞಾನ ಕ್ಕಿಂತ ಮಿಗಿಲಾದುದು ಮತ್ತಾವುದೂ ಇಲ್ಲ. ನಾನೂ ಸಹ ಜ್ಞಾನದ ಬೆನ್ನು ಹತ್ತಿದ್ದರಿಂದಲೇ ಇಂದು ಜಿಲ್ಲಾಧಿ ಕಾರಿಯಾಗಲು ಸಾಧ್ಯವಾಗಿದೆ. ಬಂಗಾರವನ್ನು ಸುಲಭವಾಗಿ ಪಡೆಯಬಹುದು, ಆದರೆ ಬಂಗಾರದ ಪದಕ ಗಳಿಸುವುದು ಕಷ್ಟ. ಅದಕ್ಕಾಗಿ ಕಠಿಣ ಶ್ರಮ ಅಗತ್ಯ ಎಂದರು.

ನೋಟು ಯಾವ ಸ್ಥಾನದಲ್ಲಿದ್ದರೂ, ಹೇಗಿದ್ದರೂ ತನ್ನ ಬೆಲೆ ಕಳೆದುಕೊಳ್ಳುವುದಿಲ್ಲ. ಹಾಗೆಯೇ ನೀವಿರುವ ಸ್ಥಳಕ್ಕೆ ನಿಮ್ಮಿಂದ ಬೆಲೆ ಸಿಗಬೇಕು. ಆ ರೀತಿ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ರಾಂಕ್ ವಿಜೇತರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಕೆ.ಷಣ್ಮುಖಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಎಸ್.ಪಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಅಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎನ್.ಎ. ಮುರುಗೇಶ್, ಪಿ.ಇ.ಎಸ್. ಸ್ಕೂಲ್ ಅಧ್ಯಕ್ಷ ಆರ್.ವೆಂಕಟರೆಡ್ಡಿ, ಬಿ.ಎಸ್.ಸಿ. ಪ್ರಥಮ ದರ್ಜೆ ಕಾಲೇಜು ಅಧ್ಯಕ್ಷ ಬಿ.ಸಿ. ಶಿವಕುಮಾರ್ ಉಪಸ್ಥಿತರಿದ್ದರು.

ತನುಜಾ ಸಂಗಡಿಗರು ಪ್ರಾರ್ಥಿಸಿದರು. ಬಿ.ಆರ್. ಅನಿತಾ ಸ್ವಾಗತಿಸಿದರು. ಚೇತನ ನಿರೂಪಿಸಿದರೆ, ಸಂಗೀತಾ ವಂದಿಸಿದರು.

error: Content is protected !!