ಹರಿಹರ, ಏ.28- ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಸದಸ್ಯೆ ಡಿ.ಯು.ರತ್ನ ಡಿ.ಉಜ್ಜೇಶ್ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸದಸ್ಯ ಎಂ. ಬಾಬುಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಘೋಷಿಸಿದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿಗೆ ನಿಗದಿಯಾಗಿತ್ತು. ಕೊನೆಗೂ ಹರಿಹರ ನಗರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಭಾಗ್ಯ ದೊರೆತಂತಾಗಿದ್ದು, ಸರ್ವೋಚ್ಛ ನ್ಯಾಯಾಲಯದಲ್ಲಿದ್ದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.
ಎಸ್‌ಟಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಬದಲಿಸಿ ಅ. 8 ರಂದು ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ದಿನೇಶ್ ಬಾಬು ರಾಜ್ಯ ಹೈಕೋರ್ಟಿನಲ್ಲಿ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಚುನಾವಣೆ ನಡೆಸುವಂತೆ ಗ್ರೀನ್ ಸಿಗ್ನಲ್ ನೀಡಿತ್ತು.
ಇದನ್ನು ಪ್ರಶ್ನಿಸಿ ಹಾಸನ, ಅರಸೀಕೆರೆ, ಹರಿಹರ, ಕೊಪ್ಪಳ, ಶಿಡ್ಲಘಟ್ಟ ನಗರಸಭಾ ಸದಸ್ಯರು ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಿಸಿರುವ ಎಸ್‌ಎಲ್‌ಪಿ ಸಂಖ್ಯೆ 12683/2020 ರಲ್ಲಿ ದಿನಾಂಕ 28/10/2020 ರಂದು ನೀಡಿರುವ ಆದೇಶದನ್ವಯ 5 ನಗರಸಭೆಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ನವೆಂಬರ್ 2 ರೊಳಗೆ ಚುನಾವಣೆ ನಡೆಸಿ ಚುನಾವಣಾ ಫಲಿತಾಂಶವನ್ನು ಮುಂದಿನ ಆದೇಶದವರಿಗೆ ಪ್ರಕಟಿಸದಿರಲು ನಿರ್ದೇಶಿಸಲಾಗಿತ್ತು.
ಸರ್ಕಾರದ ಅಧಿಸೂಚನೆ ಯುಡಿಡಿ107 ಎಮ್‌ಸಿಎಲ್‌ಆರ್ 2020 (1) ದಿ. 8/10/2020 ಅದರಂತೆ ನಗರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. ಇದರನ್ವಯ ಜಿಲ್ಲಾಧಿಕಾರಿಗಳ ಆದೇಶದನ್ವಯ ಪತ್ರ ಸಂಖ್ಯೆ ಚು.ಸಿ ಆರ್ 14/2019-20 ದಿನಾಂಕ 9/10/2020 ರಂತೆ ಉಪ ವಿಭಾಗಾಧಿಕಾರಿಗಳು 22/10/2020 ರಲ್ಲಿ ಚುನಾವಣೆ ನಿಗದಿಪಡಿಸಿ ಚುನಾವಣೆ ಪ್ರಕ್ರಿಯೆ ಮುಗಿಸಿ ಫಲಿತಾಂಶವನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕಾಯ್ದಿರಿಸಿದ್ದರು.
ಅನಂತರ ಸರ್ವೋಚ್ಛ ನ್ಯಾಯಾಲಯದ ಆದೇಶದ ಸಂಖ್ಯೆ ಎಸ್ ಸಿಎಲ್ ಎ12683/20 ದಿನಾಂಕ 28/10/2020 ರ ಆದೇಶ ಹಾಗೂ ಹೈಕೋರ್ಟ್ ಬೆಂಗಳೂರು ಇವರ ಆದೇಶ ಸಂಖ್ಯೆ ಡಬ್ಲ್ಯೂ ಎ516/2020 ದಿನಾಂಕ 21/10/2020 ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಪತ್ರ ಸಂಖ್ಯೆ ನಅಇ/84.ಕೆ ಎಂ ಆರ್/2020 ದಿನಾಂಕ 22/4/2021 ಮತ್ತು ಹೈಕೋರ್ಟಿನ ಹೆಚ್ಚುವರಿ ಸರ್ಕಾರಿ ವಕೀಲರ 21/4/2021ರ ಪತ್ರದ ನಿರ್ದೇಶನದಂತೆ ಫಲಿತಾಂಶವನ್ನು ಪ್ರಕಟಿಸಲು ಸೂಚನೆ ನೀಡಿದ್ದಾರೆ.
ಇದರನ್ವಯ ಕರ್ನಾಟಕ ಮುನಿಸಿಪಾಲಿಟಿ (ಅಧ್ಯಕ್ಷ ಮತ್ತು ಉಪಾಧ್ಯಕ್ಷ) ಚುನಾವಣಾ ನಿಯಮಗಳ 1956 ರ ಪ್ರಕಾರ ಶ್ರೀಮತಿ ಡಿ.ಯು. ರತ್ನಾ ಕೋಂ ಡಿ. ಉಜ್ಜೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಂ. ಬಾಬುಲಾಲ್ ಬಿನ್ ಅಬ್ದುಲ್ ಮಜೀದ್ ಸಾಬ್ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ತಿಳಿಸಿದ್ದಾರೆ.