ದಾವಣಗೆರೆ, ಏ. 28 – ನಗರದಲ್ಲಿ ಜಿಲ್ಲಾಸ್ಪತ್ರೆ ಹಾಗೂ ಪಾಲಿಕೆಯಿಂದ ಮೂರು ಶವ ಸಾಗಿಸುವ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಈ ವಾಹನಗಳ ಮೂಲಕ ಶವ ಸಾಗಿಸಲು ಯಾವುದೇ ಶುಲ್ಕ ಪಾವತಿ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಜಿಲ್ಲಾಸ್ಪತ್ರೆಯಲ್ಲೇ ಎರಡು ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಪಾಲಿಕೆಯ ಮುಕ್ತಿವಾಹಿನಿ ಪಡೆಯಲು ಡಾ.ಸಂತೋಷ್‍ಕುಮಾರ್ ಮೊಬೈಲ್ ಸಂಖ್ಯೆ 9448655704 ಇವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಔಷಧಿಯ ಅಗತ್ಯವಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಿಗೆ ತಿಳಿಸಲಾಗಿದೆ. ಇಂದೇ 800 ವಯಾಲ್‌ಗಳಷ್ಟು ಔಷಧಿ ಬರಲಿದೆ ಎಂದು ಬೀಳಗಿ ಹೇಳಿದರು. ಲಸಿಕೆಗೆ ಇತ್ತೀಚೆಗೆ ಹೆಚ್ಚು ಜನರು ಮುಂದೆ ಬರುತ್ತಿದ್ದಾರೆ. ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಲಸಿಕಾ ಕೇಂದ್ರಕ್ಕೆ ಬರುವವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್‌ಗಳು ಶವ ಸಾಗಣೆಗೆ ನಿಂತಿರುತ್ತವೆ. ಇವರು ಹೆಚ್ಚಿನ ಶುಲ್ಕ ಪಡೆಯುವುದು ಗಮನಕ್ಕೆ ಬಂದಿದೆ. ಆರ್.ಟಿ.ಒ. ನಿಯಮಗಳ ಪ್ರಕಾರ ಶುಲ್ಕ ಪಡೆಯಬೇಕು ಎಂದು ಎಸ್ಪಿ ಹನುಮಂತರಾಯ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಆದರೆ, ಸಿಬ್ಬಂದಿಯ ಸಂಖ್ಯೆ ಆಸ್ಪತ್ರೆ ಆರಂಭದಿಂದಲೂ ಕೊರತೆ ಇದೆ. ಪ್ರಸಕ್ತ 156 ಸ್ಟಾಫ್ ನರ್ಸ್‌ಗಳಿದ್ದು, ಒಟ್ಟು 503 ನರ್ಸ್‌ಗಳ ಅಗತ್ಯವಿದೆ. ಈ ಬಗ್ಗೆ ಸರ್ಕಾರಕ್ಕೆ ತಿಳಿಸಲಾಗಿದೆ ಎಂದರು.
ವೆಂಟಿಲೇಟರ್ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 15 ಐ.ಸಿ.ಯು.ಗಳ ನಿರ್ವಹಣೆಗೆ ಮಾನವ ಸಂಪನ್ಮೂಲ ಕಲ್ಪಿಸುವುದಾಗಿ ಈಗಾಗಲೇ ತಿಳಿಸಲಾಗಿದೆ. ಖಾಸಗಿಯಾಗಿ ಸಿಬ್ಬಂದಿಯನ್ನು ಪಡೆದು ಪರಿಸ್ಥಿತಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ಆಕ್ಸಿಜನ್ ಸ್ಯಾಚುರೇಷನ್ ಶೇ.90-94ರಷ್ಟಿದ್ದರೂ ಸಹ ಆಕ್ಸಿಜನ್ ಬೆಡ್ ರಹಿತವಾಗಿ ಪರಿಸ್ಥಿತಿ ನಿಭಾಯಿಸಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಆಕ್ಸಿಜನ್ ಅನ್ನು ಅಗತ್ಯವಿರುವ ಕೊರೊನಾ ರೋಗಿಗಳಿಗೆ ಮಾತ್ರ ಒದಗಿಸುವುದು ಸೂಕ್ತ ಎಂದರು.
ಕೊರೊನಾ ಸೋಂಕಿನಲ್ಲಿ ಐದು ಹಂತಗಳಿದ್ದು, ಮಧ್ಯಮ ಹಾಗೂ ತೀವ್ರ ಸೋಂಕಿನ ಪ್ರಕರಣಗಳಲ್ಲಿ ಮಾತ್ರ ರೆಮ್ಡಿಸಿವಿರ್ ಬೇಕಾಗುತ್ತದೆ. ಉಳಿದಂತೆ ಎಲ್ಲರಿಗೂ ಈ ಔಷಧಿ ಉಪಯುಕ್ತವಲ್ಲ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.