ಲಾರಿ ಸಂಚಾರಕ್ಕೆ ಬರಲು ಚಾಲಕರ ಹಿಂದೇಟು
ದಾವಣಗೆರೆ, ಏ. 28 – ರಾಜ್ಯ ಸರ್ಕಾರ ಕೊರೊನಾ ನಿರ್ಬಂಧದ ಮಾರ್ಗಸೂಚಿಯಲ್ಲಿ ಕೃಷಿ ಸೇವೆಗಳಿಗೆ ಅನುಮತಿ ನೀಡಿದೆಯಾದರೂ, ವಾಹನಗಳ ಗ್ಯಾರೇಜ್ ಹಾಗೂ ಪಂಕ್ಚರ್ ಅಂಗಡಿಗಳಿಗೆ ಬೆಳಿಗ್ಗೆ 6ರಿಂದ 10ರವರೆಗೆ ಮಿತಿ ಹೇರಲಾಗಿದೆ.
ಇದು ವಾಹನಗಳ ಸಾಗಣೆಗೆ ತೊಡಕಾಗಿದೆ. ಈ ನಿರ್ಬಂಧದ ನಡುವೆ ವಾಹನ ಓಡಿಸಲು ಸಾಧ್ಯವಾಗದು ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ತಿಳಿಸಿದ್ದಾರೆ.
ನಾಳೆ ಗುರುವಾರ ಗೊಬ್ಬರದ ರೇಕ್ ನಗರಕ್ಕೆ ಬರುತ್ತಿದೆ ಎಂಬ ಮಾಹಿತಿ ಇದೆ. ಗೊಬ್ಬರವನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಬೇಕಿದೆ. ಇಂತಹ ಸಂದರ್ಭದಲ್ಲಿ ವಾಹನ ಏನಾದರೂ ಕೆಟ್ಟರೆ ಇಲ್ಲವೇ ಪಂಚರ್ ಆದರೆ ತಕ್ಷಣವೇ ರಿಪೇರಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ರಸ್ತೆ ನಡುವೆಯೇ ಒಣಗುವ ಪರಿಸ್ಥಿತಿ ಬರುತ್ತಿದೆ. ಇದರಿಂದಾಗಿ ಚಾಲಕರು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಜಿಲ್ಲಾಡಳಿತದ ಬಳಿ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಆದರೆ, ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಪಂಚರ್ ಹಾಗೂ ಗ್ಯಾರೇಜ್ಗಳಿಗೆ ಅನುಮತಿ ನೀಡುವುದಾಗಿ ತಿಳಿಸಲಾಗಿದೆ. ಇದು ಸಾಗಣೆಗೆ ತೊಡಕಾಗುತ್ತಿದೆ ಎಂದವರು ಹೇಳಿದ್ದಾರೆ.
ಗೊಬ್ಬರದ ಅಂಗಡಿಗಳಿಗೆ ರಾತ್ರಿ 9ರವರೆಗೂ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ಇದೆ. ಅದೇ ರೀತಿ ಪಂಚರ್ ಹಾಗೂ ಗ್ಯಾರೇಜ್ಗಳಿಗೂ ಅನುಮತಿ ನೀಡಿ ಸಾಗಣೆಗೆ ಸಹಕರಿಸಬೇಕು ಎಂದವರು ಒತ್ತಾಯಿಸಿದ್ದಾರೆ.