ದಾವಣಗೆರೆ, ಜು. 20 – ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಎಲ್ಲ ಸಮುದಾಯದ ಜನರು ಬೆಂಬಲಿಸಿ ದ್ದಾರೆ. ಅವರನ್ನು ಹಿಂದೆ ಸರಿಯುವಂತೆ ಮಾಡಿದರೆ ಬಿಜೆಪಿಗೆ ತೊಂದರೆಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಶ್ರೀಗಳು ನಗರಕ್ಕೆ ಆಗಮಿಸಿದ್ದ ಸಂದ ರ್ಭದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡು ತ್ತಿದ್ದ ಅವರು, ರಾಜ್ಯದ ಎಲ್ಲಾ ಜನಾಂಗ ದವರಿಗೂ ನ್ಯಾಯ ದೊರಕಿಸಿಕೊಟ್ಟ ಯಡಿಯೂರಪ್ಪ ಬೆನ್ನಿಗೆ ಶ್ರೀಶೈಲ ಪೀಠ ಸೇರಿದಂತೆ ಪಂಚ ಪೀಠಗಳೂ ಹಾಗೂ ಎಲ್ಲ ಪೀಠಗಳು ಬಹುತೇಕ ಅವರ ಪರವಾಗಿ ನಿಲ್ಲುತ್ತವೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಪ್ರಶ್ನಾತೀತ ನಾಯಕ ಎಂದು ಎಲ್ಲಾ ಸಮುದಾಯದ ಜನರು ಬೆಂಬಲಿಸಿದ್ದಾರೆ. ಅವರು ಮುಖ್ಯಮಂತ್ರಿಯಾದ ನಂತರ ನಡೆದ ಬಹುತೇಕ ಎಲ್ಲ ಚುನಾವಣೆಗಳಲ್ಲಿ ರಾಜ್ಯದ ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಮುಂದುವರೆಯುವುದರಿಂದ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಶ್ರೀಗಳು ಹೇಳಿದರು.
ಇಡೀ ವೀರಶೈವ ಮಹಾಸಭೆ ಹಾಗೂ ಅದರ ಅಧ್ಯಕ್ಷರಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಯಡಿಯೂರಪ್ಪಗೆ ಬೆಂಬಲ ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ಅಥವಾ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಚೆನ್ನಾಗಿ ನಡೆಸಿಕೊಳ್ಳಬೇಕು. ಅವರಿಗೆ ಅಗೌರವವಾಗೂವಂತೆ ನಡೆದುಕೊಳ್ಳಬಾರದು ಎಂದವರು ಹೇಳಿದ್ದಾರೆ.
ಶ್ರೀಶೈಲ ಪೀಠ ಸ್ಪಷ್ಟವಾಗಿ ಯಡಿಯೂರಪ್ಪ ಅವರ ಬೆನ್ನಿಗಿದೆ. ಅವರು ಒಂದು ಧರ್ಮ, ಒಂದು ಪೀಠಕ್ಕೆ ಸೀಮಿತ ಅಲ್ಲ. ಎಲ್ಲ ಜನಾಂಗದವರಿಗೆ ನ್ಯಾಯ ಒದಗಿಸುವ ಕೀರ್ತಿ ಅವರಿಗೆ ಸಲ್ಲಬೇಕು. ಅವರಿಗೇನಾದರೂ ಆದರೆ ಎಲ್ಲ ಜನಾಂಗದವರು ಅವರ ಪರವಾಗಿ ನಿಲ್ಲುವ ಸಾಧ್ಯತೆ ಇದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಮುಂದಿನ ಏನೇನು ಬೆಳವಣಿಗೆಗಳು ಆಗುತ್ತಿವೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ಸಮಾನ ಪೀಠಾಚಾರ್ಯರ ಜೊತೆ ನಾವು ಮಾತುಕತೆ ನಡೆಸುತ್ತೇವೆ. ಅನೇಕ ಮಠಾಧೀಶರ ಜೊತೆ ಚರ್ಚೆ ಮಾಡುತ್ತೇವೆ ಎಂದ ಶ್ರೀಗಳು, ಒಂದು ವೇಳೆ ಯಡಿಯೂರಪ್ಪ ಹಿಂದೆ ಸರಿಯುವಂತೆ ಮಾಡಿದರೆ, ಪಕ್ಷಕ್ಕೆ ತೊಂದರೆಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟರು.