ಹರಿಹರ, ಏ.27- ಶಾಸಕ ಎಸ್. ರಾಮಪ್ಪ ಮತ್ತು ಅವರ ಧರ್ಮಪತ್ನಿ ಜಯಮ್ಮ ನವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ರಾಮಪ್ಪ ಅವರು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದು, 15 ದಿನಗಳ ಕಾಲ ಮನೆಯಲ್ಲೇ ಇರುವಂತೆ ವೈದ್ಯರು ಸೂಚಿಸಿದ್ದಾರೆ.
ಕಳೆದ ಮೂರು ದಿನದ ಕೆಳಗೆ ಅವರ ಪತ್ನಿಗೆ ಜ್ವರ ಬಂದು ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಅವರನ್ನು ತಪಾಸಣೆ ಮಾಡಿಸಿದಾಗ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಶಾಸಕರು ಸಹ ಕೊರೊನಾ ಪರೀಕ್ಷೆ ಮಾಡಿಸಿದಾಗ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಶಾಸಕರ ಮೂವರು ಮಕ್ಕಳಿಗೆ ಪರೀಕ್ಷೆ ಮಾಡಿಸಿದ್ದು ಅವರಲ್ಲಿ ಯಾರಿಗೂ ಕೊರೊನಾ ಬಂದಿರುವುದಿಲ್ಲ ಎಂದು ತಿಳಿದು ಬಂದಿದೆ.
ಕೊರೊನಾ ದೃಢಪಟ್ಟ ಬಳಿಕ ಶಾಸಕರು, ತಾಲ್ಲೂಕಿನ ಜನರು ತಮ್ಮನ್ನು ಭೇಟಿಯಾಗಲು ಬರದಿರುವಂತೆ ತಿಳಿಸಿದ್ದಾರೆ. ಒಂದು ವೇಳೆ ತುರ್ತು ಕಾರ್ಯವಿದ್ದಲ್ಲಿ ದೂರವಾಣಿ ಕರೆ ಮಾಡುವಂತೆ ತಿಳಿಸಿದ್ದಾರೆ. ಶಾಸಕರ ಆಪ್ತ ಸಹಾಯಕ ವಿಜಯ ಮಹಾಂತೇಶ್ ಮತ್ತು ಅವರ ಆಪ್ತರೆಲ್ಲರೂ ತಪಾಸಣೆ ಮಾಡಿಸಿಕೊಂಡಿದ್ದು ಎಲ್ಲರಿಗೂ ನೆಗೆಟಿವ್ ಬಂದಿದೆ.