ಬದುಕನ್ನು ಸಮಚಿತ್ತದಿಂದ ಅನುಭವಿಸಿ ಸಮರಸವಾಗಿ ಬದುಕುವುದೇ ಯುಗಾದಿ

ಬದುಕನ್ನು ಸಮಚಿತ್ತದಿಂದ ಅನುಭವಿಸಿ ಸಮರಸವಾಗಿ ಬದುಕುವುದೇ ಯುಗಾದಿ - Janathavaniಹಿರಿಯ ಸಾಹಿತಿ ಶಶಿಕಲಾ ಶಂಕರಮೂರ್ತಿ ವಿಶ್ಲೇಷಣೆ

ದಾವಣಗೆರೆ,ಏ.26- ಬದುಕನ್ನು ಸಮಚಿತ್ತದಿಂದ ಅನುಭವಿಸಿ ಸಮರಸವಾಗಿ ಬದುಕುವುದೇ ನಿಜವಾದ ಯುಗಾದಿ ಹಬ್ಬ ಎಂದು ಕನ್ನಡ ಭಾಷಾ ಶಿಕ್ಷಕರೂ ಆದ ಹಿರಿಯ ಸಾಹಿತಿ ಶ್ರೀಮತಿ ಎ.ಸಿ. ಶಶಿಕಲಾ ಶಂಕರಮೂರ್ತಿ ಅವರು ವಿಶ್ಲೇಷಿಸಿದರು.

ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಸ್ಥಳೀಯ ಡಯಟ್ ಕಾಲೇಜಿನಲ್ಲಿ ಕಳೆದ ವಾರ ಏರ್ಪಾಡಾಗಿದ್ದ ರಾಜ್ಯ ಮಟ್ಟದ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬದುಕೇ ಒಂದು ಜೀವಂತ ಕಾರ್ಯ. ಬಾಳುತ್ತಾ, ನೋವು – ನಲಿವನ್ನು ಸಹಜವಾಗಿ ಸ್ವೀಕರಿಸಿದಾಗ ಮಾತ್ರ ಉಜ್ವಲ ಭವಿಷ್ಯ ಸಾಧ್ಯ ಎಂದು ಉದಾಹರಣೆಗಳ ಮೂಲಕ ಶಶಿಕಲಾ ಅವರು ಪ್ರತಿಪಾದಿಸಿದರು.

ಕಾವ್ಯದ ಹುಟ್ಟು, ಕವಿ ಪದ್ಯದಲ್ಲಿ ತರಬಹುದಾದ ಸಹಜ ಪದ, ಉದಾರತೆ, ಅರ್ಥ ಮತ್ತು ಕವಿತೆ ಮೂಡಿ ಬರುವ ಬಗೆ ಕುರಿತಂತೆ ರನ್ನನ ಗಧಾಯುದ್ಧ ಹಾಗೂ ಹಳೆಗನ್ನಡ ಪದ್ಯಗಳನ್ನು ಅವರು ಉದಾಹರಿಸಿದರು.

ಸರಳತೆಯಲ್ಲೂ ನಿರಾಡಂಬರ ಕವಿತೆ ಎಷ್ಟು ವೇಗವಾಗಿ ಮೂಡಿ ಬರಬಲ್ಲದು ಎಂಬುದನ್ನು ಜನಪದ ಕಾವ್ಯಗಳ ಮೂಲಕ ಶಶಿಕಲಾ ಅವರು ವಿವರಿಸುವುದರೊಂದಿಗೆ ಸಭಿಕರ ಗಮನ ಸೆಳೆದರು.

error: Content is protected !!