ವೀರಶೈವ ಲಿಂಗಾಯತ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಬಾರದು

ವೀರಶೈವ ಲಿಂಗಾಯತ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಬಾರದು - Janathavaniಹರಿಹರ, ಫೆ.28- ಇತ್ತೀಚೆಗೆ ಕೆಲವು ಮಠಾಧೀಶರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನ ವರನ್ನು ಭೇಟಿ ಮಾಡಿ, ವೀರಶೈವ ಜಂಗಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ವೀರಶೈವ ಲಿಂಗಾಯತ ಜಂಗಮರ ಬೇಡಿಕೆಗೆ ಮನ್ನಣೆ ನೀಡಬಾರದು ಎಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.

ಶತಮಾನಗಳಿಂದ ಶೋಷಣೆಗೀಡಾದ ವಿವಿಧ ಶೋಷಿತ ಸಮಾಜಗಳ ಜನರ ಅಭಿವೃದ್ಧಿಗಾಗಿ ಸಂವಿಧಾನ ಪರಿಶಿಷ್ಟ ಜಾತಿ, ಪಂಗಡದಡಿ ಮೀಸಲಾತಿ ನೀಡಲು ಅವಕಾಶ ಕಲ್ಪಿಸಿದೆ. ಅದರಂತೆ ಅಲೆಮಾರಿಗಳಾದ ಬೇಡ ಜಂಗಮ, ಬುಡ್ಗ ಜಾತಿಗಳು ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿದೆ. ಆದರೆ, ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಮೇಲ್ವರ್ಗಕ್ಕೆ ಸೇರಿದ ಕೆಲವು ವೀರಶೈವ ಲಿಂಗಾಯತ ಜಂಗ ಮರೂ ಸಹ ತಾವು `ಬೇಡ ಜಂಗಮ’ರೆಂದು ಸುಳ್ಳು ಹೇಳಿಕೊಂಡು ಅನುಸೂಚಿತ ಜಾತಿ ಪ್ರಮಾಣ ಪತ್ರ ಪಡೆದು, ನೈಜ ಬೇಡ ಜಂಗಮರಿಗೆ ಹಾಗೂ ಅನುಸೂಚಿತ ಜಾತಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹೀಗೆ ಲಿಂಗಾಯತ ಉಪಜಾತಿಯಾದ ಜಂಗಮ ಜನಾಂಗಕ್ಕೂ ಮತ್ತು ಬೇಡ ಅಥವಾ ಬುಡ್ಗ ಜಂಗಮ ಜನಾಂಗಕ್ಕೂ ಯಾವುದೇ ಸಂಬಂಧವಿಲ್ಲವೆಂದು ಅಂತ್ರೋಪಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ಮಾನವಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ) ಸ್ಪಷ್ಟಪಡಿಸಿದೆ. ಸುಳ್ಳು ಜಾತಿ ಪ್ರಮಾಣ ನೀಡುವ ಅಧಿಕಾರಿಯ ವಿರುದ್ಧ ಕ್ರಿಮಿನಲ್ ದಾವೆ ಹೂಡಲು ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿದೆ.

ಸರ್ಕಾರ ಯಾವುದೇ ಕಾರಣಕ್ಕೂ ಇಂತಹ ಒತ್ತಡಗಳಿಗೆ ಮಣೆ ಹಾಕಬಾರದು. ಒತ್ತಡಕ್ಕೆ ಮಣಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

error: Content is protected !!