ಹರಪನಹಳ್ಳಿಯಲ್ಲಿ ಎಪಿಎಂಸಿ ಅಧ್ಯಕ್ಷ ಅಶೋಕ ಗೌಡ ಆರೋಪ
ಹರಪನಹಳ್ಳಿ, ಫೆ.26- ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕರಿಂದ ಹರಪ ನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಳಾಗುತ್ತಲಿದೆ ಎಂದು ಸ್ಥಳೀಯ ಎಪಿಎಂಸಿ ಅಧ್ಯಕ್ಷ ಅಶೋಕ ಗೌಡ ಆರೋಪಿಸಿದ್ದಾರೆ.
ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ.ಟಿ.ಪರಮೇಶ್ವರನಾಯ್ಕ ಅವರು ಇಲ್ಲಿಯ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಸೃಷ್ಟಿ ಮಾಡಿ ಸ್ವಜನ ಪಕ್ಷಪಾತ ಮಾಡುತ್ತಿರುವು ದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಸ್ವಾತಂತ್ರ್ಯ ಇಲ್ಲವಾಗಿದೆ ಎಂದು ಅವರು ದೂರಿದ್ದಾರೆ.
11-12 ವರ್ಷಗಳಿಂದ ಹರಪನಹಳ್ಳಿಯನ್ನು ತಿರುಗಿಯೂ ನೋಡದ ಇವರು ಕಳೆದ 2019 ರ ಮೇ ತಿಂಗಳಲ್ಲಿ ನಡೆದ ಹರಪನಹಳ್ಳಿ ಪುರಸಭಾ ಚುನಾವಣೆ ಸಮಯದಲ್ಲಿ ಏಕಾ ಏಕಿ ಪ್ರವೇಶ ಮಾಡಿ ಪುರಸಭಾ ಟಿಕೆಟ್ ಹಂಚಿಕೆಯಲ್ಲಿ ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಅವರ ಬೆಂಬಲಿಗರು ಹಾಗೂ ನನ್ನ ಬೆಂಬಲಿಗರು ಎಂದು ಗುಂಪುಗಾರಿಕೆ ಮಾಡಿ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿ ನಿಷ್ಠಾವಂತರಿಗೆ ಅನ್ಯಾಯ ಮಾಡಿದರು ಎಂದು ಆರೋಪಿಸಿದ್ದಾರೆ.
ತಾಲ್ಲೂಕು ಪಂಚಾಯ್ತಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ -ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕೃತವಾಗುವಂತೆ ಬಿಜೆಪಿಯವರ ಜೊತೆ ಕೈ ಜೋಡಿಸಿದ್ದರು. ಟಿಎಪಿಸಿಎಂಎಸ್ , ಲೋಕಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹವೆಸಗಿದ್ದಾರೆ, ಎಪಿಎಂಸಿ ಚುನಾವಣೆ ದಿ. ಎಂ.ಪಿ. ರವೀಂದ್ರ ಅವರ ನೇತೃತ್ವದಲ್ಲಿ ನಡೆದಿತ್ತು.ಸಂಪೂರ್ಣ ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷದಲ್ಲಿ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಪ್ರತಿ 10 ತಿಂಗಳಿಗೆ ಒಬ್ಬೊಬ್ಬರು ಎಂದು ಮಾತಾಗಿತ್ತು. ಆ ಪ್ರಕಾರ ಇತರರಿಗೆ ಅವಕಾಶ ನೀಡಿದ್ದರೂ ನನಗೆ ಮಾತ್ರ 10 ತಿಂಗಳು ನೀಡದೆ ಕೇವಲ 6-7 ತಿಂಗಳಿಗೆ ರಾಜಿನಾಮೆ ನೀಡಲು ದೌರ್ಜನ್ಯ ಮಾಡಿರುತ್ತಾರೆ ಎಂದು ದೂರಿದರು.
10 ತಿಂಗಳು ಅಧಿಕಾರ ನಡೆಸಿ ನಾನು ರಾಜೀನಾಮೆ ನೀಡಲು ಸಿದ್ಧವಿದ್ದರೂ ಅವಿಶ್ವಾಸ ಸಭೆ ನಡೆಯಲು ಪಿ.ಟಿ.ಪಿ ಕಾರಣರಾಗಿರುತ್ತಾರೆ ಎಂದು ಅವರು ಹೇಳಿದರು.
ಆದರೂ ನನಗೆ ನ್ಯಾಯಾಲಯ ಅವಿಶ್ವಾಸ ಸಭೆಗೆ ಸಂಬಂಧ ಪಟ್ಟಂತೆ ನ್ಯಾಯ ಕೊಟ್ಟಿದ್ದು, ಎಪಿಎಂಸಿ ಅಧ್ಯಕ್ಷರಾಗಿ ನಾನು ಮುಂದುವರಿಯುತ್ತೇನೆ. ಕಾನೂನು ರೀತ್ಯ ಆಡಳಿತ ನಡೆಸುತ್ತೇನೆ, ಒಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಇತ್ತ ಕಡೆ ಗಮನ ಹರಿಸದಿದ್ದರೆ ಹರಪನಹಳ್ಳಿಯಲ್ಲಿ ಪಿ.ಟಿ.ಪರಮೇಶ್ವರನಾಯ್ಕರಿಂದ ಕಾಂಗ್ರೆಸ್ ಪಕ್ಷ ಹಾಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಆರೋಪಿಸಿದ್ದಾರೆ.ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಸುರೇಶ ಹಾಜರಿದ್ದರು.