ವೆಂಟಿಲೇಟರ್ ಸಿಗದೇ ಪದ್ಮಭೂಷಣ ಪುರಸ್ಕೃತ ಗಾಯಕನ ಸಾವು

ವೆಂಟಿಲೇಟರ್ ಸಿಗದೇ ಪದ್ಮಭೂಷಣ ಪುರಸ್ಕೃತ ಗಾಯಕನ ಸಾವು - Janathavaniನವದೆಹಲಿ ಏ. 25 – ಕೊರೊನಾ ಸೋಂಕಿನ ಕಾರಣದಿಂದಾಗಿ ಹೆಸರಾಂತ ಹಿಂದೂಸ್ತಾನಿ ಗಾಯಕ ಪಂಡಿತ್ ರಾಜನ್ ಮಿಶ್ರ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮಿಶ್ರ ಹಾಗೂ ಅವರ ಸಹೋದರ ಸಜನ್ ಮಿಶ್ರ ಅವರನ್ನು ಸೆಂಟ್ ಸ್ಟೀಫನ್ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ದಾಖಲಿಸಲಾಗಿತ್ತು.

ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ, ವೆಂಟಿಲೇಟರ್ ಬೇಕಾಗಿತ್ತು. ಆದರೆ, ಎಷ್ಟೇ ಪ್ರಯತ್ನ ಪಟ್ಟರೂ ವೆಂಟಿಲೇಟರ್ ಒದಗಿಸಲು ಸಾಧ್ಯವಾಗಲಿಲ್ಲ ಎಂದು ಮಿಶ್ರ ಪುತ್ರ ರಜನೀಶ್ ತಿಳಿಸಿದ್ದಾರೆ.

ಮಿಶ್ರ ಅವರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ಸಹೋದರ ಸಜನ್ ಮಿಶ್ರ ಅವರೂ ಹಿಂದೂಸ್ತಾನಿ ಗಾಯಕರಾಗಿದ್ದಾರೆ. ಮಿಶ್ರ ನಿಧನ ಸಂಗೀತ ಲೋಕದಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ಮೂಲಕವೂ ಮಿಶ್ರ ಸ್ನೇಹಿತರು ಹಾಗೂ ಹಿತೈಷಿಗಳು ಹೇಳಿಕೆ ನೀಡಿ ವೆಂಟಿಲೇಟರ್ ಹೊಂದಿಸುವ ಪ್ರಯತ್ನ ನಡೆಸಿದರು. ನಂತರದಲ್ಲಿ ಪ್ರಧಾನ ಮಂತ್ರಿ ಕಚೇರಿ ನೆರವಿಗಾಗಿ ಸಂಪರ್ಕಿಸಿತು. ಆದರೆ, ಆ ವೇಳೆಗಾಗಲೇ ಮಿಶ್ರ ಸಂಜೆ 6.30ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು ಎಂದು ರಜನೀಶ್ ಹೇಳಿದ್ದಾರೆ.

ಮಿಶ್ರ ಅವರನ್ನು ವೆಂಟಿಲೇಟರ್ ಇರುವ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬದವರು ತೀವ್ರ ಪ್ರಯತ್ನ ನಡೆಸಿದರು. ಆದರೆ, ಆ ಪ್ರಯತ್ನ ಕೈಗೂಡದ ಕಾರಣ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.

ಮಿಶ್ರ ಅವರು 15-20 ದಿನಗಳ ಹಿಂದೆ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಮಧ್ಯಾಹ್ನ ಅವರಿಗೆ ಮೊದಲ ಹೃದಯಾಘಾತವಾಗಿತ್ತು. ನಂತರ ಸಂಜೆ 5.30ಕ್ಕೆ ಇನ್ನೊಮ್ಮೆ ಹೃದಯಾಘಾತವಾಯಿತು ಎಂದು ಮಿಶ್ರ ಸಂಬಂಧಿ ಅಮಿತ್ ಹೇಳಿದ್ದಾರೆ.

error: Content is protected !!