ಹರಪನ ಹಳ್ಳಿ, ಜು.16- ಖಾಸಗಿ ಗೊಬ್ಬರ ಅಂಗಡಿ ಮಾಲೀಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡಿದರೆ, ಅಂತಹ ಅಂಗಡಿ ಮಾಲೀಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಅಂಗಡಿ ಪರವಾನಗಿ ರದ್ದುಪಡಿಸಲಾಗುವುದೆಂದು ತಾಲ್ಲೂಕು ಕೃಷಿ ಇಲಾಖೆ ನಿರ್ದೇಶಕ ಮಂಜುನಾಥ್ ಗೊಂದಿ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿರುವ ಖಾಸಗಿ ಗೊಬ್ಬರದ ಅಂಗಡಿಗಳ ಮಾಲೀಕರು ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಾಲ್ಲೂಕು ಕೃಷಿ ನಿರ್ದೇಶಕ ಮಂಜುನಾಥ್ ಗೊಂದಿ ಖುದ್ದು ಪಟ್ಟಣದ ಕೆಲ ಖಾಸಗಿ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚಿನ ಹಣವನ್ನು ರೈತರಿಂದ ಪಡೆದರೆ ಮುಲಾಜಿಲ್ಲದೆ ಅಂಗಡಿಯ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.