ಹರಪನಹಳ್ಳಿ, ಜು.16- ಆರ್ಟಿಐ ಕಾರ್ಯಕರ್ತ ಟಿ. ಶ್ರೀಧರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಪತ್ತೆಗಾಗಿ 2-3 ತಂಡಗಳನ್ನು ರಚಿಸಲಾಗುವುದು ಎಂದು ಬಳ್ಳಾರಿ ಐಜಿಪಿ ಮನೀಷ್ ತಿಳಿಸಿದ್ದಾರೆ.
ಪಟ್ಟಣದ ಎಡಿಬಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೊಲೆ ನಡೆದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೂಲಂಕುಶವಾಗಿ ತನಿಖೆ ಮಾಡಲಾಗುವುದು. ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೊಲೆಗೀಡಾದ ಶ್ರೀಧರ್ ಅವರ ಪತ್ನಿ ಪಿ.ಎಂ. ಶಿಲ್ಪ, ತಡರಾತ್ರಿ ಇಲ್ಲಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹೋಟೆಲ್ ಮಾಲೀಕನ ಪ್ರಕಾರ ಆರ್ . ವಾಗೀಶ್ ಹಾಗು ಇತರೆ 4 ಜನರು ನನ್ನ ಗಂಡನನ್ನು ಯಾವುದೋ ದುರುದ್ದೇಶಕ್ಕಾಗಿ ಕಬ್ಬಿಣದ ರಾಡು, ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಲಾವಣ್ಯ, ಡಿವೈಎಸ್ಪಿ ಹಾಲಮೂರ್ತಿ ರಾವ್, ಸಿಪಿಐ ನಾಗರಾಜ ಕಮ್ಮಾರ, ಗುಪ್ತದಳದ ಡಿವೈಎಸ್ಪಿ ಬಿ.ಎಸ್. ತಳವಾರ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.